ಪುತ್ತೂರು: ಕೊರೊನಾ ಲಾಕ್‌ಡೌನ್‌ಗೆ ಹಿನ್ನೆಲೆ ಸಂಕಷ್ಟದಲ್ಲಿರುವ ಬಡಜನತೆಗೆ ವಿವಿಧ ಸಂಘಟನೆಗಳು ಮತ್ತು ದಾನಿಗಳು ನೀಡಿದ ಕೊಡುಗೆಯನ್ನು ಶಾಸಕರ ವಾರ್ ರೂಮ್‌ನಿಂದ ವಿತರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ವಿತರಿಸಲಾದ ಆಹಾರ ಪದಾರ್ಥಗಳ ಕಿಟ್‌ವೊಂದರಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ಅದರ ಮಾಲೀಕರಿಗೆ ಹಿಂತಿರುಗಿಸಿ ಬಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಹಾಗಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಬಾಲಕನ ಮನೆಗೆ ತೆರಳಿ ಸನ್ಮಾನಿಸಿದರು.
ಶಾಸಕರ ವಾರ್ ರೂಮ್‌ನಿಂದ ನೀಡಿದ ಆಹಾರ ಪದಾರ್ಥಗಳ ಕಿಟ್ ತೆರೆದಾಗ ಕರ್ಮಲದ ಹನೀಫ್ ಎಂಬುವರ ಪುತ್ರ ಹುಕಾಸ್ ಎಂಬ ಬಾಲಕನಿಗೆ ಚಿನ್ನದುಂಗುರ ದೊರಕಿತ್ತು. ಈ ಬಗ್ಗೆ ಹುಕಾಸ್ ನಗರಸಭಾ ಸದಸ್ಯೆ ಪ್ರೇಮಲತಾ ರಾವ್ ಅವರಿಗೆ ಮಾಹಿತಿ ನೀಡಿದರು. ಆಹಾರ ಪದಾರ್ಥಗಳ ಕಿಟ್ ಪ್ಯಾಕಿಂಗ್ ಕೆಲಸವನ್ನು ಮಾಡಿದ ನಿತ್ಯ ಕರಸೇವಕರೊಬ್ಬರ ಉಂಗುರ ಎಂದು ತಿಳಿದು ಅವರಿಗೆ ಉಂಗುರವನ್ನು ಹಿಂತಿರುಗಿಸಲಾಯಿತು.
ಈ ಮಾಹಿತಿ ಪಡೆದ ಶಾಸಕ ಸಂಜೀವ ಮಠಂದೂರು, ಸಂಕಷ್ಟದ ಸಮಯದಲ್ಲೂ ಪ್ರಾಮಾಣಿಕತೆ ಮೆರೆದ ಬಾಲಕ ಹುಕಾಸ್ ಮನೆಗೆ ತೆರಳಿ ಆತನಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ, ಬಿಜೆಪಿ ನಗರ ಮಂಡಲದ ಉಪಾಧ್ಯಕ್ಷ ರಾಧಾಕೃಷ್ಣ ನಂದಿಲ, ರಾಮ್‌ದಾಸ್ ಹಾರಾಡಿ ಮತ್ತಿತರರು ಹಾಜರಿದ್ದರು.