ಮಂಗಳೂರು: ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಅವರನ್ನು ಸಚಿವರನ್ನಾಗಿ ಮಾಡಿ ಎಂದು ನಗರದ ಸಮಾನ ಮನಸ್ಕ ಮೀನುಗಾರರ ವೇದಿಕೆ ಆಗ್ರಹಿಸಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ. ಉಡುಪಿ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಶರತ್ ಗುಡ್ಡೆಕೊಪ್ಲ, ಕರ್ನಾಟಕದಲ್ಲಿ ಗಂಗಾಮತ/ ಮೊಗವೀರ ಸಮುದಾಯಕ್ಕೆ ಸೇರಿರುವ ಶಾಸಕರು ಲಾಲಾಜಿ ಮೆಂಡನ್ ಮಾತ್ರ. ರಾಜ್ಯದಲ್ಲಿ ನಮ್ಮ ಸಮುದಾಯದಲ್ಲಿ 80 ಲಕ್ಷ ಜನಸಂಖ್ಯೆ ಇದೆ. ಆದರೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಮೊಗವೀರ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದೀಗ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಸಂದರ್ಭದಲ್ಲಿ ಲಾಲಾಜಿ ಮೆಂಡನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ದೇವರಾಜ್ ಅರಸು ಅವರ ಕಾಲದಿಂದಲೂ ಮೊಗವೀರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಮೋದ್ ಮಧ್ವರಾಜ್ ಅವರು ಸಚಿವರಾಗಿದ್ದರು. ಆದರೆ, ಈಗಿನ ಸರ್ಕಾರದಲ್ಲಿ ಮೊಗವೀರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿಲ್ಲ ಎಂದು ತಿಳಿಸಿದರು.
ಲಾಲಾಜಿ ಮೆಂಡನ್ ಅವರು ಮೂರು ಬಾರಿ ಶಾಸಕರಾಗಿದ್ದು, ಹಿರಿಯ ಅನುಭವಿ ಮತ್ತು ಕಳಂಕರಹಿತ ರಾಜಕಾರಣಿಯಾಗಿದ್ದಾರೆ. ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.