ಮಂಗಳೂರು : ಕೊರೊನಾ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದರ ಅಂಕಿಅಂಶಗಳನ್ನು ಜನರ ಮುಂದೆ ಇಟ್ಟಿದ್ದಾರೆ. ಹಾಗಾಗಿ ಇದಕ್ಕೆ ದಾಖಲೆ ಕೊಡಿ ಎಂದು ಕೇಳುವುದನ್ನು ಬಿಟ್ಟು, ಯಾರು ಇದರಲ್ಲಿ ದುಡ್ಡು ತಿಂದಿದ್ದಾರೋ ಅವರ ಮೇಲೆ ಸರ್ಕಾರ ಕ್ರಮಕೈಗೊಳ್ಳಲಿ. ಅಲ್ಲದೇ ಸರ್ಕಾರಕ್ಕೆ ಲೆಕ್ಕ ಕೇಳುವ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ. ಆದ್ದರಿಂದ ತಕ್ಷಣ ಇದರ ಲೆಕ್ಕ ಕೊಡಿ, ಇಲ್ಲದಿದ್ದಲ್ಲಿ ಅಧಿಕಾರ ಬಿಟ್ಟು ತೊಲಗಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೆ, ಅವರು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ತೆರಳಿ ಎಷ್ಟು ಬೆಡ್ ಕೋವಿಡ್ ಸೋಂಕಿತರಿಗೆ ಮೀಸಲಿರಿಸಲಾಗಿದೆ ಎಂದು ಪರಿಶೀಲನೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಪ್ರತಿ ಮೆಡಿಕಲ್ ಕಾಲೇಜುಗಳಲ್ಲಿ ಸರ್ಕಾರದ ಹೆಲ್ಪ್ ಡೆಸ್ಕ್ಗಳನ್ನು ತೆರೆಯಲಿ. ಕೋವಿಡ್ ಸೋಂಕಿತರು ಮೃತಪಟ್ಟಲ್ಲಿ ಮೃತದೇಹ ಅಂತ್ಯಸಂಸ್ಕಾರ ನಡೆಸಲು ಪಿಪಿಇ ಕಿಟ್ನ ಮೃತರ ಮನೆಯವರಿಗೆ ಒದಗಿಸಬೇಕು. ಆ್ಯಂಬುಲೆನ್ಸ್ ಖರ್ಚನ್ನು ನೀಡಬೇಕು. ಮೃತದೇಹದ ಅಂತ್ಯಸಂಸ್ಕಾರವನ್ನೂ ಕುಟುಂಬಸ್ಥರೇ ಮಾಡಬೇಕಾದಲ್ಲಿ ಸರ್ಕಾರದ ಪಾಲು ಏನು ಎಂದು ಕೇಳಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಹಳಷ್ಟು ಖರ್ಚಾಗುವುದು ಎಲ್ಲರಿಗೂ ತಿಳಿದಿರುವಂತದ್ದು, ಸರ್ಕಾರಿ ಆಸ್ಪತ್ರೆಗೆ ಬರುವವರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ದಿನಕ್ಕೆ 15-20 ಸಾವಿರದವರೆಗೂ ರೋಗಿಗಳ ಮೇಲೆ ಬಿಲ್ ಹಾಕಲಾಗುತ್ತಿದೆ. 400 ರೂ. ಇರುವ ಪಿಪಿಇ ಕಿಟ್ಗೆ ರೋಗಿಗಳಿಂದ 2,000-2,500 ರೂ. ವಸೂಲಿ ಮಾಡಲಾಗುತ್ತಿದೆ. ಅದಲ್ಲದೆ ಸ್ಯಾನಿಟೈಸೇಷನ್, ಮಾಸ್ಕ್ಗಳಿಗೆ ನಿಗದಿತ ದರಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ದರವನ್ನು ರೋಗಿಗಳಿಗೆ ಹೇರಲಾಗುತ್ತಿದೆ.
ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಈಗಾಗಲೇ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಲಾಕ್ಡೌನ್ ಯಶಸ್ವಿಯಾಗಬೇಕಾದ್ರೆ ಸರ್ವಪಕ್ಷದ ಸಭೆ ಕರೆದು ಚರ್ಚೆ ನಡೆಸಬೇಕು. ಅಲ್ಲದೇ ಸೋಂಕು ಸಮುದಾಯಕ್ಕೆ ಹರಡಿದ್ದು, ಇದನ್ನು ಪತ್ತೆಹಚ್ಚಲು ರ‍್ಯಾಂಡಮ್ ತಪಾಸಣೆಯಾಗಲಿ. ಮಳೆ ಪ್ರಾರಂಭಗೊಂಡಿದ್ದು, ಮಾಮೂಲಿ ಶೀತ, ಜ್ವರ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ಅವರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಅದಕ್ಕೆ ಸರಿಯಾದ ವ್ಯವಸ್ಥೆ ಮಾಡಲಿ ಎಂದು ಐವನ್ ಡಿಸೋಜ ಆಗ್ರಹಿಸಿದರು.