ಶಿರಾಡಿ: ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಶಿರಾಡಿ ಘಾಟ್ನ ಕೆಂಪುಹೊಳೆ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು. ಇದೀಗ ಟ್ಯಾಂಕರ್ ತೆರವು ಕಾರ್ಯಾಚರಣೆ ಬಹುತೇಕ ಮುಗಿದಿದ್ದು, ವಾಹನ ಸಂಚಾರ ಆರಂಭವಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಂಪುಹೊಳೆ ಸಮೀಪ ಮಂಗಳೂರಿನಿಂದ ಗ್ಯಾಸ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಹೊರಟಿದ್ದ ಟ್ಯಾಂಕರ್ ಪಲ್ಟಿಯಾಗಿತ್ತು. ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಹಿನ್ನೆಲೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿತ್ತು. ಬೆಂಗಳೂರಿಗೆ ಸಂಚರಿಸುವವರು ಮಾಣಿ-ಮೈಸೂರು ರಸ್ತೆಯಲ್ಲಿ ಸಂಚಾರ ಮಾಡುವಂತೆ ತಿಳಿಸಲಾಗಿತ್ತು. ನೆಟ್ವರ್ಕ್ ಸಮಸ್ಯೆಯಿಂದಾಗಿ ತೆರವು ಕಾರ್ಯಾಚರಣೆ ವಿಳಂಬವಾಗಿತ್ತು.
ಓದಿ:ಶಿರಾಡಿ ಘಾಟ್ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸಂಚಾರಕ್ಕೆ ತಡೆ
ಸದ್ಯ ಅನಿಲ ಟ್ಯಾಂಕರ್ ತೆರವು ಕಾರ್ಯಾಚರಣೆ ಸರಿಸುಮಾರು ಮುಗಿದಿದ್ದು, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅನಿಲ ಸೋರಿಕೆಯಾಗಿದ್ದ ಹಿನ್ನೆಲೆ ಫೆ. 5 ರಂದು ಬೆಳಗ್ಗೆ 11.00 ಗಂಟೆಯಿಂದ 02.00 ಗಂಟೆಯ ತನಕ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73 ರ ಶಿರಾಡಿ ಘಾಟ್ ಮೂಲಕ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದೀಗ ಈ ರಸ್ತೆಯು ಸಂಚಾರಕ್ಕೆ ಮುಕ್ತವಾಗಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.