ಮಂಗಳೂರು: ಗ್ಯಾಸ್ ಸಿಲಿಂಡರ್ ರಿಪೇರಿ ಅಂಗಡಿಯಲ್ಲಿ ಸಿಲಿಂಡರ್ಗೆ ಬೆಂಕಿ ತಗುಲಿ ಸ್ಫೋಟಗೊಂಡಿರುವ ಘಟನೆ ನಿನ್ನೆ ಸಂಜೆ ನಗರದ ಜಪ್ಪು ಮಾರ್ಕೆಟ್ ಬಳಿ ನಡೆದಿದೆ.
ಬೆಂಕಿ ಕಂಡ ತಕ್ಷಣ ಶಾಪ್ ಸಿಬ್ಬಂದಿ ಸಿಲಿಂಡರನ್ನು ಹೊರಗಡೆ ಎಸೆದ ಪರಿಣಾಮ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆದರೆ ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಸಿಲಿಂಡರ್ನ ತುಂಡುಗಳು 40-50 ಮೀಟರ್ ದೂರಕ್ಕೆ ಚಿಮ್ಮಿವೆ. ಒಂದು ತುಂಡು ಜಪ್ಪು ಮೀನು ಮಾರುಕಟ್ಟೆಯ ಒಳಗೆ ಬಿದ್ದಿದೆ. ಅಲ್ಲದೆ ಸಿಲಿಂಡರ್ ಭಾಗಗಳು ಸ್ಫೋಟಗೊಂಡು ಸಿಡಿದ ಪರಿಣಾಮ ಅಲ್ಲೇ ಪಕ್ಕದ ಅಂಗಡಿಯ ಶೆಟರ್ ಗೆ ಹಾನಿಯಾಗಿದೆ. ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದೆ.
ಸ್ಫೋಟಕದ ರೀತಿ ಸಿಡಿದ ಸಿಲಿಂಡರ್ ತುಂಡುಗಳು ಯಾರ ಮೇಲಾದರೂ ಬಿದ್ದಿದ್ದರೆ ಖಂಡಿತಾ ಪ್ರಾಣಾಪಾಯ ಸಂಭವಿಸುತ್ತಿತ್ತು. ಸ್ವಲ್ಪದರಲ್ಲೇ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.