ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೀಗಾಗಿ ಎಲ್ಲೆಡೆ ಗಣೇಶೋತ್ಸವವನ್ನು ಸರಳವಾಗಿ ಆಚರಿಸುತ್ತಿರುವುದರಿಂದ ಮಾರುಕಟ್ಟೆಗಳು ಕಳೆಗುಂದಿವೆ. ಹೂವು, ಹಣ್ಣು, ಕಬ್ಬು ಹೀಗೆ ಹಬ್ಬದ ತಯಾರಿ ಸಾಮಗ್ರಿಗಳನ್ನು ಮಾರುವ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಬ್ಬಕ್ಕಾಗಿ ರಾಶಿ, ರಾಶಿ ಹೂವುಗಳನ್ನು ಮಾರುಕಟ್ಟೆಗೆ ತರಲಾಗಿದೆ. ಈಗ ವ್ಯಾಪಾರವೇ ಇಲ್ಲವಾಗಿದೆ. ಇದರಿಂದ ಸಾವಿರಾರು ರೂಪಾಯಿ ಬಂಡವಾಳ ನಷ್ಟವಾಗುತ್ತದೆ. ನಾಳೆಯಾದರೂ ಗ್ರಾಹಕರು ಬರಬಹುದು ಎಂಬ ನಂಬಿಕೆಯಿಂದ ಕಾಯಬೇಕಿದೆ ಎಂದು ಹೊಳೆನರಸೀಪುರದ ವ್ಯಾಪಾರಿ ನಂಜೇಗೌಡರು ಸಮಸ್ಯೆ ಹೇಳಿಕೊಂಡರು.
ಎರಡು ಗಣೇಶ ಮೂರ್ತಿ ತಯಾರಿ: ಬಂಟ್ವಾಳ ತಾಲೂಕಿನ ವಿವಿಧ ಗಣೇಶೋತ್ಸವಗಳಿಗೆ ಆಕರ್ಷಕ ವಿಗ್ರಹ ತಯಾರಿಸುವಲ್ಲಿ ಸಿದ್ಧಹಸ್ತರಾಗಿರುವ ಹಾಗೂ ಕಳೆದ 26 ವರ್ಷಗಳಿಂದ ವಿಗ್ರಹಗಳ ಸಿದ್ಧತಾ ಕಾರ್ಯ ನಡೆಸುತ್ತಿರುವ ಬಸ್ತಿ ಸದಾಶಿವ ಶೆಣೈ, ಶಂಕರ ನಾರಾಯಣ ಹೊಳ್ಳ ಈ ಬಾರಿ ಎರಡು ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಿದ್ದಾರೆ.
ಸುಮಾರು 150ರಷ್ಟು ಮೂರ್ತಿಗಳು ಸಿದ್ಧಗೊಂಡಿವೆ. ಸರ್ಕಾರದ ನಿಯಮದ ಪ್ರಕಾರ ತಾಲೂಕಿನಲ್ಲಿ ಸುಮಾರು 45 ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ. ಅಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.
ಇತಿಹಾಸ ಪ್ರಸಿದ್ಧ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದಲ್ಲೂ ಸರಳವಾಗಿ ಗಣೇಶನ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.