ಮಂಗಳೂರು: ರಾಮಜನ್ಮಭೂಮಿ ಟ್ರಸ್ಟ್ನಿಂದ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ, ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಅತೃಪ್ತ ಆತ್ಮಗಳು ಮೊಸರಿನಲ್ಲಿ ಕಲ್ಲು ಹುಡುಕುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ನಗರದ ಕೊಡಿಯಾಲ ಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರ ಮಾನಸಿಕ ಸ್ಥಿತಿ ಬದಲಾಗುತ್ತಿರುವ ಈ ಕಾಲದಲ್ಲಿ ಇದನ್ನು ಸಮಾಜ ಕಣ್ಣುಮುಚ್ಚಿ ನೋಡಿಕೊಂಡು ಕುಳಿತುಕೊಳ್ಳುವುದಿಲ್ಲ. ನಾಡಿನ ಜನತೆಯ ಭಾವನೆಗಳನ್ನು ಅವಮಾನಿಸಿರುವ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಜನತೆಯ ಮುಂದೆ ಬೇಷರತ್ ಕ್ಷಮೆ ಯಾಚಿಸಲಿ ಎಂದು ಒತ್ತಾಯಿಸಿದರು.
ಕಾನೂನು ಪದವೀಧರರಾದ ಮಾಜಿ ಸಿಎಂ ಸಿದ್ದರಾಮಯ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪು ಧಿಕ್ಕರಿಸಿ ಶ್ರೀ ರಾಮಮಂದಿರ ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗುವ ಕಟ್ಟಡ, ಹಾಗಾಗಿ ತಾನು ದೇಣಿಗೆ ನೀಡುವುದಿಲ್ಲ ಎಂದು ಹೇಳಿದ್ದರು. ಅವರಿಗೆ ಕನಿಷ್ಠ ಜ್ಞಾನವಿದ್ದರೆ ಅವರು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಖಂಡಿಸುತ್ತಿರಲಿಲ್ಲ. ಸಿದ್ದರಾಮಯ್ಯ ಹಿಂದಿನಿಂದಲೂ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತಿ ವೈಷಮ್ಯ ಪ್ರತಿಪಾದಿಸಿ ವರ್ಗ ಸಂಘರ್ಷವನ್ನು ಸೃಷ್ಟಿ ಮಾಡಿ ತನ್ನ ರಾಜಕೀಯ ಬೇಳೆಕಾಳು ಬೇಯಿಸಿಕೊಂಡು ರಾಜಕೀಯ ಮಾಡಿದವರು ಎಂದು ಟೀಕಿಸಿದರು.
ಈ ಸುದ್ದಿಯನ್ನೂ ಓದಿ: ರಾಮ ಮಂದಿರ ನಿರ್ಮಾಣ ವಿರೋಧಿಸುವವರು ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿದಂತೆ: ಸಿಎಂ ಯಡಿಯೂರಪ್ಪ
ಅದೇ ರೀತಿ ಮತ್ತೋರ್ವ ಮಾಜಿ ಸಿಎಂ ಕುಮಾರಸ್ವಾಮಿ ಕೇವಲ ಒಂದು ವರ್ಗದ ಮತಗಳ ಓಲೈಕೆಗಾಗಿ ನಿಧಿ ಸಂಗ್ರಹ ಅಭಿಯಾನ ಪಾರದರ್ಶಕವಾಗಿಲ್ಲ, ಮನೆಗೆ ಸ್ಟಿಕ್ಕರ್ ಅಂಟಿಸಿ ಹೋಗುತ್ತಾರೆ, ಹಣ ಕೊಡದಿರುವ ಮನೆಯನ್ನು ಗುರುತಿಸಲಾಗುತ್ತದೆ ಎಂದು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಇದು ಖಂಡನೀಯ ಎಂದರು.