ಮಂಗಳೂರು: ಇಂಧನ ಬೆಲೆ ದಿನೇ-ದಿನೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರು ಜೀವನ ನಿರ್ವಹಿಸುವುದು ಬಹಳ ಕಷ್ಟಕರವಾಗಿದೆ. ಎಗ್ಗಿಲ್ಲದೇ ಏರಿಕೆ ಕಾಣುತ್ತಿರುವ ಇಂಧನ ಬೆಲೆ ಪ್ರತಿಯೊಂದರ ಮೇಲೂ ತನ್ನ ಪರಿಣಾಮ ಬೀರಿದೆ. ಇದ್ರಿಂದ ಮನೆ ಮನೆಗೆ ತಿಂಡಿ - ತಿನಿಸು, ಆಹಾರ ಪೂರೈಸುವ ಫುಡ್ ಡೆಲಿವರಿ ಬಾಯ್ಸ್ ಸಂಕಷ್ಟಕ್ಕೀಡಾಗಿದ್ದಾರೆ.
ತಮ್ಮ ಸ್ವಂತ ಬೈಕ್-ಸ್ಕೂಟರ್ಗಳಲ್ಲಿ ಆರ್ಡರ್ ಬಂದ ಮನೆಗಳಿಗೆ ಈ ಡೆಲಿವರಿ ಬಾಯ್ಸ್ ಫುಡ್ ಡೆಲಿವರಿ ಮಾಡುತ್ತಾರೆ. ತಾವಿರುವ ಸ್ಥಳಕ್ಕೆ ತಮ್ಮಿಷ್ಟದ ಹೋಟೆಲ್ಗಳಿಂದ ತಿಂಡಿಗಳನ್ನು ತರಿಸಿ ತಿನ್ನುವ ಟ್ರೆಂಡ್ ಹೆಚ್ಚಿರುವುದರಿಂದ ಫುಡ್ ಡೆಲಿವರಿ ಬಾಯ್ಸ್ಗೆ ಉದ್ಯೋಗವೂ ಹೆಚ್ಚಿತ್ತು. ಜೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಕೆಲ ಸಂಸ್ಥೆಗಳು ಈ ಸೇವೆಯನ್ನು ಒದಗಿಸುತ್ತಿದೆ. ಈ ಕಾರಣದಿಂದ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿದೆ. ಆದರೆ ಇದೀಗ ಉದ್ಯೋಗವಕಾಶ ಸೃಷ್ಟಿಯಾದರೂ ಇಂಧನ ಬೆಲೆ ಹೆಚ್ಚಳದಿಂದಾಗಿ ಆ ಉದ್ಯೋಗವು ಪ್ರಯೋಜನ ಇಲ್ಲದಂತಾಗಿದೆ.
ಸ್ವಿಗ್ಗಿಯಲ್ಲಿ ಒಂದು ಆರ್ಡರ್ ಮೇಲೆ ಪ್ರತಿ ಕಿಲೋಮೀಟರ್ಗೆ 4 ರೂಪಾಯಿ ನೀಡಲಾಗುತ್ತಿದೆ. ಇದನ್ನು 6 ರೂಪಾಯಿ ಮಾಡಬೇಕೆಂಬುದು ಸ್ವಿಗ್ಗಿ ಫುಡ್ ಡೆಲಿವರಿ ಸಿಬ್ಬಂದಿಯ ಬೇಡಿಕೆಯಾಗಿದೆ. ಪೆಟ್ರೋಲ್ಗೆ 73 ರೂಪಾಯಿ ಇದ್ದಾಗಲೂ ಇದೇ ದರ ನೀಡುತ್ತಿದ್ದ ಸ್ವಿಗ್ಗಿ ಸಂಸ್ಥೆ ಪೆಟ್ರೋಲ್ ದರ 93 ಆದಾಗಲೂ ಇದೇ ದರದಲ್ಲಿ ವ್ಯವಹಾರ ನಡೆಸುತ್ತಿದೆ.
ಜೊಮ್ಯಾಟೋ ಸಂಸ್ಥೆ ಪೆಟ್ರೋಲ್ ದರ ಏರಿಕೆ ಹಿನ್ನೆಲೆ, ಪ್ರತಿ ಕಿಲೋ ಮೀಟರ್ಗೆ 5.25 ದರವನ್ನು ಸಿಬ್ಬಂದಿಗೆ ನೀಡುತ್ತಿದೆ. ಪ್ರತಿ ಆರ್ಡರ್ಗೆ ಇಷ್ಟು ಕಡಿಮೆ ದರ ಪಡೆದು ಅದರಲ್ಲಿ ಸೇವೆ ನೀಡುವುದು, ಪೆಟ್ರೋಲ್ಗೆ ಖರ್ಚು ಮಾಡುವುದು, ವಾಹನದ ನಿರ್ವಹಣೆ ಮಾಡುವುದು ಕಷ್ಟಕರ ಎನಿಸಿದೆ.
ಇದನ್ನೂ ಓದಿ: ಇಂಧನ ಬೆಲೆ ಏರಿಕೆ: ಸರ್ಕಾರಿ ಬಸ್ಗಳ ಮೊರೆ ಹೋದ ಜನರು
ಮಂಗಳೂರಿನಲ್ಲಿ ಸುಮಾರು 200 ಮಂದಿ ಫುಡ್ ಡೆಲಿವರಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪಡೆಯುವ ಸರಾಸರಿ ಆದಾಯ ರೂ. 400. ಇದರಲ್ಲಿ ಅರ್ಧದಷ್ಟು ಹಣವನ್ನು ಪೆಟ್ರೋಲ್ಗೆ ನೀಡಬೇಕಾಗುತ್ತದೆ. ಉಳಿದ ಹಣದಲ್ಲಿ ವಾಹನದ ನಿರ್ವಹಣೆ ಮತ್ತು ಜೀವನ ಸಾಗಿಸಬೇಕಾಗಿದ್ದು, ಬಹಳ ಸಂಕಷ್ಟದಲ್ಲಿದ್ದಾರೆ.
ಇಂಧನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಇದೀಗ ಫುಡ್ ಡೆಲಿವರಿ ಸಿಬ್ಬಂದಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇವರಲ್ಲದೇ ಸಾಮಾನ್ಯ ಜನರು ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸರ್ಕಾರ ಇನ್ನಾದರೂ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.