ಮಂಗಳೂರು: ಸರ್ಕಾರ ಮತ್ತೊಮ್ಮೆ ಲಾಕ್ಡೌನ್ ಮಾಡಲು ಹೊರಟಿದೆ. ಆದರೆ ಈವರೆಗೆ ಸರ್ಕಾರ ತೆಗೆದುಕೊಂಡ ನಿರ್ಧಾರದಲ್ಲಿ ವಿಫಲವಾಗಿದ್ದು, ಹಾಗಾಗಿ ಸರ್ವಪಕ್ಷದ ಸಭೆ ಕರೆದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.
ಎರಡನೇ ಬಾರಿ ಲಾಕ್ಡೌನ್ ಮಾಡಿ ಯಶಸ್ಸು ಸಾಧಿಸಬೇಕಾದರೆ ಮೊದಲು ಜನರ ಸಹಕಾರ ತೆಗೆದುಕೊಳ್ಳಬೇಕು. ಕೊರೊನಾ ನಿರ್ಮೂಲನೆ ಮಾಡಲು ಸರ್ಕಾರ ಜನರ ಸಹಕಾರ ಪಡೆದುಕೊಳ್ಳದೆ, ಜನಪ್ರತಿನಿಧಿಗಳ ಸಲಹೆ ಪಡೆಯದೆ ಏಕಾಏಕಿ ನಿರ್ಧಾರ ಕೈಗೊಂಡಿರುವುದೇ ಮೊದಲ ಲಾಕ್ಡೌನ್ ಸೋತಿರುವುದ್ದಕ್ಕೆ ಕಾರಣ ಎಂದು ಹೇಳಿದರು.
ಕೊರೊನಾ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ದಕ್ಷಿಣ-ಕನ್ನಡ ಜಿಲ್ಲೆಯಲ್ಲಿ 46 ಜನರು ಮೃತಪಟ್ಟರೆ, ಕರ್ನಾಟಕದಲ್ಲಿ 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದೆ. ಆದರೆ ಉಳಿದ ಕಡೆಗಳಲ್ಲಿ ಏನು ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ ಅಧಿಕಾರಿಗಳು ನಿಜಾಂಶವನ್ನು ಸರ್ಕಾರದ ಗಮನಕ್ಕೆ ತರದಿರುವುದೇ ಈ ಅನಾಹುತಕ್ಕೆ ಕಾರಣ. ಹಾಗಾಗಿ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಲಿ ಎಂದರು.
ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಸುಡಲು ಇರುವಂತಹ ಬೋಳಾರ ರುದ್ರಭೂಮಿಯ ವಿದ್ಯುತ್ ಚಿತಾಗಾರ ಹಾಳಾಗಿ ಸಾಕಷ್ಟು ಕಾಲವಾಯಿತು. ಆದರೆ ಇದುವರೆಗೆ ಜಿಲ್ಲಾಡಳಿತಕ್ಕೆ ಅದನ್ನು ಸರಿ ಮಾಡಲು ಸಾಧ್ಯವಾಗಿಲ್ಲ. ಯಾವುದೇ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಅರಿಯಲು ರಸ್ತೆಗಳಿಯುತ್ತಿಲ್ಲ. ಉಸ್ತುವಾರಿ ಮಂತ್ರಿಗಳು ಬರೋದೆ ಇಲ್ಲ. ಇತ್ತೀಚೆಗೆ ಬೋಳಾರದ ವ್ಯಕ್ತಿಯೋರ್ವರು ಮೃತಪಟ್ಟಾಗ ಯಾವುದೇ ಸರ್ಕಾರಿ ಅಧಿಕಾರಿಗಳು ಅಲ್ಲಿಗೆ ಬಂದಿಲ್ಲ. ಆರೇಳು ಗಂಟೆ ಕಾದು ಕುಟುಂಬಸ್ಥರೇ ಪಿಪಿಇ ಕಿಟ್ ತೊಟ್ಟುಕೊಂಡು ಸುಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ ಕೊರೊನಾ ಸೋಂಕು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಆಸ್ಪತ್ರೆಗಳ ವ್ಯವಸ್ಥೆ, ಕ್ವಾರೆಂಟೈನ್ ವ್ಯವಸ್ಥೆ ಸರಿಯಾಗದೆ. ಲಾಕ್ಡೌನ್ನಿಂದಲೇ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಯಾರಾದರೂ ಆಲೋಚನೆ ಮಾಡಿದಲ್ಲಿ ಅದು ಮೂರ್ಖರ ತೀರ್ಮಾನ ಆಗುತ್ತದೆ. ಮೊದಲು ಉಳ್ಳಾಲದಲ್ಲಿ ಮಾಡಿದಂತೆ ದಕ್ಷಿಣ ಕನ್ನಡ ಜಿಲ್ಲೆ ಪೂರ್ತಿ ತಪಾಸಣೆ ಮಾಡಲಿ. ಬೆಂಗಳೂರಿನಲ್ಲಿರುವಷ್ಟೇ ಪ್ರಕರಣಗಳು ಸಿಗುತ್ತವೆ. ಲ್ಯಾಬ್ ಗಳನ್ನು ಜಾಸ್ತಿ ಮಾಡುತ್ತಿಲ್ಲ. ಅಲ್ಲದೆ ಬಡವರಿಗೆ ಸೋಂಕು ಬಂದಲ್ಲಿ ಅವರ ಪೂರ್ತಿ ಖರ್ಚು ವೆಚ್ಚ ಸರ್ಕಾರವೇ ಭರಿಸಲಿ ಎಂದು ಒತ್ತಾಯಿಸಿದರು.