ಮಂಗಳೂರು : ತಮ್ಮ ಮಗ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ, ಮಾಜಿ ಶಾಸಕ ಮೊಯ್ದೀನ್ ಬಾವಾ ಫೇಸ್ ಬುಕ್ ಲೈವ್ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನನ್ನ ಮಗ ಬೆಂಗಳೂರಿನಿಂದ ಮಂಗಳೂರಿಗೆ ಬಂದಾಗ ಸಣ್ಣದಾಗಿ ಜ್ವರದಿಂದ ಬಳಲುತ್ತಿದ್ದ ಎಂಬ ವಿಚಾರ ತಿಳಿಯಿತು. ತಕ್ಷಣ ಆತನನ್ನು ನೇರ ಮನೆಗೆ ಬರುವುದು ಬೇಡ ಕೆಎಂಸಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿ ಬರುವುದು ಒಳಿತು ಎಂದು ಆಸ್ಪತ್ರೆಗೆ ಕಳುಹಿಸಿದ್ದೆ. ಕೋವಿಡ್ ತಪಾಸಣೆ ನಡೆಸಿ, ಅಲ್ಲಿಯೇ ಕ್ವಾರಂಟೈನ್ಗೂ ಒಳಗಾದ. ಬಳಿಕ ಅವನ ಗಂಟಲು ದ್ರವದ ವರದಿ ಪಾಸಿಟಿವ್ ಎಂದು ಬಂದಿದೆ. ಇಂದಿಗೆ ಐದು ದಿನವಾಯಿತು, ಆತ ಕೆಮ್ಮು, ಜ್ವರ ಸೇರಿದಂತೆ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯದಿಂದ ಇದ್ದಾನೆ ಎಂಬ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ನನ್ನ ಎಲ್ಲಾ ಆತ್ಮೀಯ ಮಿತ್ರರಲ್ಲಿ ಮನವಿ ಮಾಡುವುದೆಂದರೆ, ಕೋವಿಡ್ ಸೋಂಕಿನಿಂದ ಬಳಲುವ ಪ್ರತಿಯೊಬ್ಬರಿಗೂ ನಿಮ್ಮ ಪ್ರಾರ್ಥನೆಯ ಅಗತ್ಯವಿದೆ. ಕೋವಿಡ್ ಸೋಂಕು ಬಂತೆಂದು ಹೆದರುವ ಅಗತ್ಯವಿಲ್ಲ. ಧೈರ್ಯ ತಂದುಕೊಂಡರೆ ಸಾಕು. ಆದ್ದರಿಂದ ಸಮಾಜದ ಒಳಿತಿಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಪಾಲಿಸೋಣ. ಅದೇ ರೀತಿ ಸಭೆ ಸಮಾರಂಭಗಳನ್ನು ಆಯೋಜನೆ ಮಾಡದೆ ಇರುವುದು ಬಹಳ ಅಗತ್ಯವಿದೆ. ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದ್ದರಿಂದ ಸೋಂಕಿನ ಲಕ್ಷಣ ಗೋಚರವಾದರೆ ಮುಚ್ಚಿಡಲು ಪ್ರಯತ್ನಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನನಗೆ ನನ್ನ ಮಗನ ಸೋಂಕಿನ ವಿಚಾರವನ್ನು ಮುಚ್ಚಿಟ್ಟು ಆತನನ್ನು ಪ್ರತ್ಯೇಕವಾಗಿ ಇರಿಸುವ ಎಲ್ಲಾ ವ್ಯವಸ್ಥೆಯೂ ಇತ್ತು. ಆದರೆ ನಾನು ಯಾವುದೇ ರೀತಿ ಮುಚ್ಚಿಡದೆ ಜನರಿಗೆ ನನ್ನ ಮಗನಿಂದ ತೊಂದರೆಯಾಗಬಾರದೆಂದು ಆಸ್ಪತ್ರೆಗೆ ಕಳುಹಿಸಿದ್ದೇನೆ ಎಂದಿದ್ದಾರೆ.
ಅದೇ ರೀತಿ ನನ್ನ ಮನೆಯನ್ನು ಸೀಲ್ ಡೌನ್ ಮಾಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ನಾನು ಜನಪ್ರತಿನಿಧಿಯಾಗಿದ್ದರೂ ಯಾವುದೇ ರೀತಿ ಪ್ರಭಾವವನ್ನು ಬಳಸದೆ ಜನರಿಗೆ ತೊಂದರೆಯಾಗದಂತೆ ವರ್ತಿಸಿದ್ದೇನೆ. ಮಗನಿಗೆ ಸೋಂಕು ದೃಢಗೊಂಡ ಮರು ದಿನವೇ ನಾನು ನನ್ನ ಪತ್ನಿ ಕೋವಿಡ್ ತಪಾಸಣೆಗೆ ಒಳಗಾಗಿದ್ದೇವೆ. ನಮಗೆ ನೆಗೆಟಿವ್ ವರದಿ ಬಂದಿದೆ. ಕೆಲವು ಮಾಧ್ಯಮಗಳಲ್ಲಿ ನನ್ನ ಮನೆ ಸೀಲ್ ಡೌನ್ ಮಾಡಿರುವ ವಿಷಯವನ್ನು ಬಹಳ ದಪ್ಪ ಅಕ್ಷರಗಳಲ್ಲಿ ಬಿಂಬಿಸಿದ್ದಾರೆ. ಆಗಲಿ ಅದರಿಂದ ಅವರಿಗೆ ಸಂತೋಷವಾದಲ್ಲಿ ನನಗೂ ಸಂತೋಷ. ಎಲ್ಲರೂ ಕೊರೋನಾ ಸೋಂಕಿನಿಂದ ಜಗತ್ತು ಮುಕ್ತವಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ.