ಮಂಗಳೂರು : ಅಖಂಡ ಭಾರತದ ಬೇಡಿಕೆಯಿಡುವ ಬಿಜೆಪಿಗರು ಬೇರೆ ದೇಶಕ್ಕೆ ಹೋಗಿ ದೊಂದಿ(ಪಂಜಿನ) ಮೆರವಣಿಗೆ ಮಾಡಲಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಯನ್ನು ಟೀಕಿಸುವ ಬಿಜೆಪಿಯವರು ಭಾರತ್ ತೋಡೋ ಎನ್ನುತ್ತಾರೆ. ಬಿಜೆಪಿಯವರು ಅಖಂಡ ಭಾರತ ಎಂದು ಹೇಳುತ್ತಾರೆ. ಸ್ವಾತಂತ್ರ್ಯದ ಮುನ್ನಾ ದಿನ ದೊಂದಿ ಹಿಡಿದು ಮೆರವಣಿಗೆ ಮಾಡುತ್ತಾರೆ. ಇವರು ಅಪ್ಘಾನಿಸ್ತಾನ, ಬಾಂಗ್ಲಾ, ಬರ್ಮಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳು ಭಾರತದಿಂದ ಪ್ರತ್ಯೇಕವಾಗಿದೆ. ಇವರಿಗೆ ಎದೆಗಾರಿಕೆ ಇದ್ದರೆ ಇನ್ನೊಂದು ದೇಶಕ್ಕೆ ಹೋಗಿ ದೊಂದಿ ಮೆರವಣಿಗೆ ಮಾಡಲಿ ಎಂದು ಆಗ್ರಹಿಸಿದರು.
ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ಒಡೆಯುವ ಶಕ್ತಿಗಳ ವಿರುದ್ಧ ಮನಸ್ಸುಗಳನ್ನು ಜೋಡಿಸುವ ಕೆಲಸದಲ್ಲಿ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿಯ ರಥಯಾತ್ರೆ ಬಳಿಕ ರಕ್ತಪಾತವಾಯಿತು. ಆದರೆ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಮನಸುಗಳನ್ನು ಜೋಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಸಿಟಿ ರವಿ ವಿರುದ್ಧ ವಾಗ್ದಾಳಿ : ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಸಿ ಟಿ ರವಿ ಟೀಕೆ ಮಾಡುತ್ತಿದ್ದಾರೆ. ಆದರೆ ಸಿ ಟಿ ರವಿ ಅವರಿಗೆ ಖರ್ಗೆಯವರ ರಾಜಕೀಯ ಅನುಭವದಷ್ಟು ವಯಸ್ಸಾಗಿಲ್ಲ. ಮೊನ್ನೆ ಮೊನ್ನೆ ಕಣ್ಣು ಬಿಟ್ಟ ಅವರಿಗೆ ಖರ್ಗೆಯವರಿಗೆ ಮಾತನಾಡುವ ಯೋಗ್ಯತೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ಖರ್ಗೆಯವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮೇಳೆ ರಾಜ್ಯಕ್ಕೆ ಪವರ್ ಸೆಂಟರ್ ಆಗಲಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ನಮಗೆ ಅನುಕೂಲ ಆಗಿದೆ ಅಷ್ಟೇ. ಬಿಜೆಪಿಯಲ್ಲಿ ನಡ್ಡಾರವರು ರಾಷ್ಟ್ರಾಧ್ಯಕ್ಷ. ಅವರ ತೀರ್ಮಾನವೇ ಆಗುತ್ತದೆಯೇ?. ಅಲ್ಲಿ ಮೋದಿ, ಅಮಿತ್ ಶಾ ಅವರು ಹೇಳಿದ ಹಾಗೆ ಆಗುತ್ತದೆ. ಕಾಂಗ್ರೆಸ್ ಅಷ್ಟು ಕೆಳಸ್ತರಕ್ಕೆ ಇಳಿಯುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಬಿಲ್ಲವ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಪಾದಯಾತ್ರೆ: ಪ್ರಣವಾನಂದ ಸ್ವಾಮೀಜಿ