ಮಂಗಳೂರು: ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು, ಆಧಾರಸ್ತಂಭವೇ ಕುಸಿದಂತಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ನುಡಿ ನಮನ ಸಲ್ಲಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಹ್ಮದ್ ಪಟೇಲ್ ಶ್ರದ್ಧಾಂಜಲಿ ಸಭೆಯಲ್ಲಿ ಅಹ್ಮದ್ ಪಟೇಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಅಹ್ಮದ್ ಪಟೇಲರನ್ನು ಕಾಂಗ್ರೆಸ್ ಕಾರ್ಯಕರ್ತರು ತಲೆಯ ಮೇಲೆ ಕುರಿಸಬೇಕು ಎಂದು ಹೇಳಿದರು.
ಸಣ್ಣ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಪಟೇಲ್ ಅವರು ಪ್ರಥಮ ಬಾರಿಗೆ ತಾಪಂ ಚುನಾವಣೆ ಎದುರಿಸುತ್ತಾರೆ. ಅಲ್ಲಿಂದ ಹಂತ - ಹಂತವಾಗಿ ಮೇಲೆ ಬಂದು ಕಿರಿಯ ವಯಸ್ಸಿನಲ್ಲೇ ಲೋಕಸಭೆ ಪ್ರವೇಶಿಸಿದ್ದರು. ರಾಜ್ಯಸಭಾ ಸದಸ್ಯರಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಪಕ್ಷದಲ್ಲಿ ಮುಖ್ಯ ತೀರ್ಮಾನ ಆಗಬೇಕಾದಲ್ಲಿ ಅಹ್ಮದ್ ಪಟೇಲ್ ಜೊತೆ ಚರ್ಚೆ ಮಾಡಲಾಗುತ್ತಿತ್ತು. ಅವರು ಪಕ್ಷಕ್ಕೆ ಕೊಡುಗೆ ಕೊಟ್ಟಿದ್ದಾರೆಯೇ ಹೊರತು ಪಕ್ಷ ಮುಜುಗರ ಪಡುವಂತಹ ಕೆಲಸವನ್ನು ಮಾಡಿಲ್ಲ ಎಂದು ರೈಯವರು ಅಹ್ಮದ್ ಪಟೇಲ್ ಆತ್ಮಕ್ಕೆ ಚಿರಶಾಂತಿ ಕೋರಿದರು.