ಬಂಟ್ವಾಳ: ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಎಸ್.ಡಿ.ಪಿ.ಐ. ಬೆಂಬಲ ನೀಡಿದ ವಿಚಾರವೀಗ ರಾಜಕೀಯ ಚರ್ಚೆಗಳಿಗೂ ಗ್ರಾಸವಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಎಂಬ ಆರೋಪ ನಿರಾಧಾರವಾದುದು. ಒಂದು ಸ್ಥಾನ ಅವರಿಗೆ, ಇನ್ನೊಂದು ಸ್ಥಾನ ನಮಗೆ ಹಂಚಿದರೆ ಅದು ಹೊಂದಾಣಿಕೆ. ಕಾಂಗ್ರೆಸ್ ಎರಡೂ ಸ್ಥಾನಕ್ಕೆ ಸ್ಪರ್ಧಿಸಿ ಎರಡೂ ಸ್ಥಾನವನ್ನು ಗೆದ್ದಿದೆ. ಇದರಲ್ಲಿ ಹೊಂದಾಣಿಕೆಯ ಮಾತೇ ಇಲ್ಲವೆಂದು ರಮಾನಾಥ ರೈ ಸ್ಪಷ್ಟಪಡಿಸಿದರು.
ನಾನು ಶಾಸಕ ಮತ್ತು ಸಚಿವನಾಗಿದ್ದ ಸಂದರ್ಭ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೀರು, ರಸ್ತೆ ಸಹಿತ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರ ಫಲವಾಗಿ ಪುರಸಭೆ ಚುನಾವಣೆಯಲ್ಲಿ ಇತರ ಪಕ್ಷಗಳಿಗಿಂತ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಹೆಚ್ಚು ಸ್ಥಾನ ಹೊಂದಿದ್ದ ನಮ್ಮ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.
ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡಿಲ್ಲ. ಯಾರಾದರೂ ನಮ್ಮ ಅಭ್ಯರ್ಥಿಗಳನ್ನು ಸ್ವಯಂ ಆಗಿ ಬೆಂಬಲಿಸಿದರೆ ಅದು ಅವರ ಇಷ್ಟ. ಅದಕ್ಕೆ ನಾವು ಬೇಡ ಎನ್ನಲು ಆಗುವುದಿಲ್ಲ ಎಂದರು. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಸಿದ್ಧಾಂತ ಇಲ್ಲ. ಕಾಂಗ್ರೆಸ್ ನಲ್ಲಿ ಇರುವುದು ಜಾತ್ಯತೀತ ಸಿದ್ಧಾಂತ ಮಾತ್ರ ಎಂದು ರಮಾನಾಥ ರೈ ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್.ಡಿ.ಪಿ.ಐ. ಮುಖಂಡ ಮುನೀಶ್ ಆಲಿ, ಭ್ರಷ್ಟಾಚಾರ ರಹಿತ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ. ಫ್ಯಾಸಿಸ್ಟ್ ಶಕ್ತಿಗಳನ್ನು ದೂರವಿಡಲು ಈ ರೀತಿ ಮಾಡಲಾಗುತ್ತಿದ್ದು, ಇದೊಂದು ಸಾಂದರ್ಭಿಕ ಬೆಂಬಲ ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಎಸ್.ಡಿ.ಪಿ.ಐ. ಒಂದೇ ನಾಣ್ಯದ ಎರಡು ಮುಖಗಳು ಎಂದಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಗೆ ಎಸ್.ಡಿ.ಪಿ.ಐ. ಬೆಂಬಲ ನೀಡಿದ ವಿಚಾರವೀಗ ರಾಜಕೀಯ ವಿಶ್ಲೇಷಣೆಗಳಿಗೂ ಗ್ರಾಸವಾಗಿದೆ.