ಮಂಗಳೂರು: ಪೊಲೀಸ್ ಇಲಾಖೆಯ ಬಗ್ಗೆ ಗೃಹಸಚಿವರು ನೀಡಿರುವ ಹೇಳಿಕೆ ಅವರ ಇಲಾಖೆಯ ವೈಫಲ್ಯವನ್ನು ಎತ್ತಿ ಹಿಡಿದಿದ್ದು ಅವರು ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಎಂಜಲು ಕಾಸು ತಿನ್ನುವವರು ಎಂದು ಶ್ವಾನಕ್ಕೆ ಹೋಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಸರ್ಕಾರದ ಆಡಳಿತ ವ್ಯವಸ್ಥೆ ಸರಿ ಇಲ್ಲ ಎಂಬುದನ್ನು ತೋರಿಸಿದೆ. ಇದು ಸರ್ಕಾರದ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಾಗಿದೆ ಎಂದರು.
ನಾನು ಸಚಿವನಾಗಿದ್ದ ವೇಳೆ ಅಂದಿನ ದ.ಕ ಜಿಲ್ಲಾ ಎಸ್ಪಿ ಅವರನ್ನು ಬೈದಿದ್ದೇನೆ ಎಂದು ಅಪಪ್ರಚಾರ ಮಾಡಲಾಗಿದೆ. ಅಂದು ಎಸ್ಪಿಯವರೇ ನನ್ನ ಕಚೇರಿಗೆ ಬಂದಾಗ ಕರೆದು ಮಾತನಾಡಿದ್ದೆ. ನಾನು ಮಾತನಾಡಿದ್ದನ್ನು ಬೈದದ್ದು ಎಂದು ಅಪಪ್ರಚಾರ ಮಾಡಲಾಯಿತು. ನಾನು ಬೈದಿದ್ದರೆ, ಅದನ್ನು ಅಂದಿನ ಎಸ್ಪಿ ಯವರು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಕೊಲ್ಲೂರು ದೇವಸ್ಥಾನದ 3.5 ಕೋಟಿ ಹಣವನ್ನು ಚೆಕ್ ಮೂಲಕ ಕಲ್ಲಡ್ಕ ಶ್ರೀರಾಮ ಶಾಲೆಗೆ ನೀಡಲಾಗಿದೆ. ಹುಂಡಿಯ ಹಣವನ್ನು ಚೆಕ್ ಮೂಲಕ ನೀಡಿದ್ದನ್ನು ವಿರೋಧಿಸಿದೆ. ದೇವಸ್ಥಾನದಿಂದ ಅಕ್ಕಿ, ತರಕಾರಿ ನೀಡಿದ್ದರೆ ವಿರೋಧಿಸುತ್ತಿರಲಿಲ್ಲ. ಇದನ್ನು ಕೂಡ ಅಪಪ್ರಚಾರ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಂ ಯುವಕರ ಹತ್ಯೆ ನಡೆದಾಗ ಅಪಪ್ರಚಾರ ನಡೆಸಲಾಯಿತು. ಈ ಹತ್ಯೆಗಳಿಲ್ಲ ಕಾಂಗ್ರೆಸ್ನ ಯಾವುದೇ ಕಾರ್ಯಕರ್ತರು ಭಾಗಿಯಾಗಿಲ್ಲ. ಎಸ್ಡಿಪಿಐ, ಬಿಜೆಪಿ ಕಾರ್ಯಕರ್ತರು ಮಾತ್ರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಕಾಂಗ್ರೆಸ್ನವರ ಮೇಲೆ ಎಫ್ಐಆರ್ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ಯಾಗುವೆ ಎಂದು ಮಾಜಿ ಸಚಿವರು ತಿಳಿಸಿದರು.
ಬಿಜೆಪಿ ಆಡಳಿತದಲ್ಲಿ ಗ್ರಾಮ ಪಂಚಾಯತ್ ನಿಂದ ಒಂದೇ ಒಂದು ಮನೆ ನೀಡಲಾಗಿಲ್ಲ. ನೀಡಿದ್ದು ಹೌದಾದರೆ ರಾಜಕೀಯ ನಿವೃತ್ತಿ ಆಗುತ್ತೇನೆ. ಈಗ ಗ್ರಾಮ ಪಂಚಾಯತ್ ನಲ್ಲಿ ನಡೆಯುವ ಪ್ರಮುಖ ಯೋಜನೆಯೆಂದರೆ ಕಾಂಗ್ರೆಸ್ ಪಕ್ಷ ಆರಂಭಿಸಿದ ಉದ್ಯೋಗ ಖಾತ್ರಿ ಯೋಜನೆ. ಪಂಚಾಯತ್ ಸದಸ್ಯರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ವಿಧಾನ ಪರಿಷತ್ಗೆ ಆಯ್ಕೆ ಮಾಡಲಿದ್ದಾರೆ ಎಂದು ರಮಾನಾಥ್ ರೈ ವಿಶ್ವಾಸ ವ್ಯಕ್ತಪಡಿಸಿದರು.