ಉಳ್ಳಾಲ(ದಕ್ಷಿಣ ಕನ್ನಡ): 'ದಕ್ಷಿಣ ಕನ್ನಡ ಜಿಲ್ಲೆಯು ಹಿಂದುತ್ವದ ಫ್ಯಾಕ್ಟರಿಯಾಗಿದೆ. ಇಲ್ಲಿಂದಲೇ ಕೋಮುವಾದ ಶುರುವಾಗಿದೆ. ಅದರ ಬೀಜ ಇಲ್ಲಿನ ಲ್ಯಾಬ್ಗಳಿಂದಲೇ ಉತ್ಪತ್ತಿಯಾಗುತ್ತಿದೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದರು. ಹರೇಕಳ ಕಡವಿನಬಳಿಯ ಯು.ಟಿ.ಫರೀದ್ ವೇದಿಕೆಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್‌ನ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
'ಅಧಿಕಾರಕ್ಕೆ ಬಂದ ನಂತರ ಹಲವು ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಒಗ್ಗಟ್ಟಿನ ದೇಶವಾಗಿರುವ ಭಾರತವನ್ನು ಈಗಿನ ಡಬಲ್ ಇಂಜಿನ್ ಸರಕಾರ ಮುರಿದುಹಾಕಿದೆ. ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ನಂ.1 ಆಗಲಿದೆ. ಹೀಗಿರುವಾಗ ಎಲ್ಲರಿಗೂ ರಕ್ಷಣೆ ಸಿಗಬೇಕು. ಅದಕ್ಕೆಂದೇ ಎಲ್ಲರಿಗೂ ಸಮಾನ ಹಕ್ಕನ್ನು ನೀಡುವ ಸಂವಿಧಾನವನ್ನು ಅಂಬೇಡ್ಕರ್ ಬರೆದುಕೊಟ್ಟಿದ್ದಾರೆ. ಯಾರು ಯಾವ ಧರ್ಮವನ್ನು ಬೇಕಾದರೂ ಅನುಸರಿಸಬಹುದು. ಅದು ಅವರವರ ಇಚ್ಛೆಗೆ ಬಿಟ್ಟಿದ್ದು. ಆದರೆ ಬಿಜೆಪಿಗರಿಗೆ ಅಸಮಾನತೆಯ ಸಮಾಜ ಬೇಕಿದೆ. ಜಾತಿ ವ್ಯವಸ್ಥೆಯನ್ನು ನಿರ್ಮಿಸಿ ಒಂದು ಜಾತಿಯವರನ್ನು ಮತ್ತೊಂದು ಜಾತಿಗೆ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಆರ್ಥಿಕ ಅಸಮಾನತೆಯಿದ್ದರೆ ದೌರ್ಜನ್ಯ ಮಾಡಲು ಸುಲಭವಾಗುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಪರೇಶ್ ಮೇಸ್ತಾ ಸಾವಿಗೆ ನ್ಯಾಯ ಕೊಡುವುದರ ಬದಲಾಗಿ ಕಾಂಗ್ರೆಸಿಗರೇ ಕೊಲೆ ಮಾಡಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ. ಆದರೆ ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದೆ. ಅವರ ತನಿಖೆಯ ಮೇರೆಗೆ ಇದೊಂದು ಕೊಲೆಯಲ್ಲ, ಆಕಸ್ಮಿಕ ಸಾವೆಂದು ತನಿಖೆಯ ವೇಳೆ ತಿಳಿದು ಬಂತು. ಇಂತಹ ಅನೇಕ ಕೊಲೆಗಳನ್ನು ಬೇರೆಯವರ ಮೇಲೆ ಎತ್ತಿಕಟ್ಟುವ ಕೆಲಸ ದ.ಕ ಜಿಲ್ಲೆಯಲ್ಲಿ ಆಗಿದೆ, ಈಗಲೂ ಆಗುತ್ತಿದೆ' ಎಂದರು.
ಇದನ್ನೂ ಓದಿ: ಬಿಜೆಪಿ ಮತ್ತು ಕಾಂಗ್ರೆಸ್ನವರ ಯಾತ್ರೆ ವಿರುದ್ಧ ವಾಗ್ದಾಳಿ :ನಿಖಿಲ್ ಕುಮಾರಸ್ವಾಮಿ
'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿ. ಬದಲಾಗಿ ಅವರು ಆರ್ಎಸ್ಎಸ್ ಮುಖ್ಯಮಂತ್ರಿಯಲ್ಲ. ಅವರೆಲ್ಲಾ ಅಲ್ಪಸಂಖ್ಯಾತರು ಕೊಲೆಯಾದ ಮನೆಗೆ ಹೋಗುವುದಿಲ್ಲ. ಸರಕಾರದ ಖಜಾನೆ ಜನರ ತೆರಿಗೆಯಿಂದ ಬರುವ ಆದಾಯವನ್ನು ಒಂದೇ ಕಡೆಗೆ ಪರಿಹಾರ ನೀಡಿ ಆರ್ಎಸ್ಎಸ್ನವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿರದ ಆರ್ಎಸ್ಎಸ್ನವರಿಗೆ ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಓರ್ವ ವಿದೂಷಕ. ಯಕ್ಷಗಾನದಲ್ಲೂ ಬಿಜೆಪಿ ವಿಚಾರಗಳನ್ನು ಪ್ರಚಾರಪಡಿಸಲು ಹೇಳುತ್ತಾನೆ. ಆರಾಧಿಸುವ ಕಲೆ ಯಕ್ಷಗಾನದಲ್ಲಿ ಕೋಮುವಾದವನ್ನು ಬಿತ್ತುತ್ತಿದ್ದಾನೆ. ಬದಲಾಗಿ ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಇಲ್ಲ. ಒಂದು ವರ್ಷ ಐದು ತಿಂಗಳಾದರೂ ಗುತ್ತಿಗೆದಾರ ಅಸೋಸಿಯೇಷನ್ ಅಧ್ಯಕ್ಷ ಕೆಂಪಯ್ಯ ಬರೆದ ಪತ್ರವನ್ನು ಈವರೆಗೂ ಸರಕಾರ ತನಿಖೆ ನಡೆಸಿಲ್ಲ. ಇನ್ನೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ, ತುಮಕೂರಿನಲ್ಲಿ ಪ್ರಸಾದ್ ಗುತ್ತಿಗೆದಾರ ಆತ್ಮಹತ್ಯೆ, ಲಿಂಬಾವಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರದೀಪ್ ಆತ್ಮಹತ್ಯೆ, ಅಲ್ಲದೇ ಶಿವಕುಮಾರ್ ಎಂಬ ಗುತ್ತಿಗೆದಾರ ಬಿಲ್ ಪಾವತಿಯಾಗದೇ ಇರುವುದಕ್ಕೆ ಪತ್ರ ಬರೆದು ದಯಾಮರಣ ಕೇಳುತ್ತಿದ್ದಾರೆ. ಇಂತಹ ಸರಕಾರ ನಮಗೆ ಬೇಕಿದೆಯೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರುಗಳಾದ ಬಿ.ಕೆ.ಹರಿಪ್ರಸಾದ್, ಹರೀಶ್ ಕುಮಾರ್ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಮಾಜಿ ಶಾಸಕರುಗಳಾದ ಜೆ.ಆರ್.ಲೋಬೊ, ಮೊಯ್ದೀನ್ ಬಾವಾ, ಕೋಡಿಜಾಲ್ ಇಬ್ರಾಹಿಂ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕಣಚೂರು ಮೋನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ತುಮಕೂರಿಗೆ ಯಾರೇ ಬಂದರೂ ಬಿಜೆಪಿ ಸರ್ಕಾರದ ವಿರೋಧಿ ಅಲೆ ಕಡಿಮೆ ಆಗಲು ಸಾಧ್ಯವೇ ಇಲ್ಲ: ಸಿದ್ದರಾಮಯ್ಯ