ಸುಬ್ರಹ್ಮಣ್ಯ (ದ.ಕ): ಅರಣ್ಯ ಲೂಟಿ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ವಿಷಯ ತಿಳಿಸಿ ಉನ್ನತ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ ವ್ಯಕ್ತಿಯ ಮನೆಗೇ ಅರಣ್ಯ ಇಲಾಖೆ ಸಿಬ್ಬಂದಿ ತಡರಾತ್ರಿ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕಡಬ ತಾಲೂಕಿನ ಐತೂರಿನಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಬಿಳಿನೆಲೆ ರಕ್ಷಿತಾರಣ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮರಗಳನ್ನು ಕಡಿದು ಸಾಗಾಟ ನಡೆಸಲಾಗುತ್ತಿದೆ ಎಂದು ಐತೂರು ನಿವಾಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಮರ ಸಾಗಾಟದ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಅಧಿಕಾರಿಗಳು ದೂರುದಾರ ಪ್ರಸಾದ್ ಮನೆಗೆ ದಾಳಿ ನಡೆಸಿ, ಛಾವಣಿಯಲ್ಲಿದ್ದ 30 ವರ್ಷ ಹಳೆಯ ಮರದ ಹಲಗೆಯನ್ನು ಸೀಜ್ ಮಾಡಿದ್ದಾರೆ.
ಇದಕ್ಕೂ ಮೊದಲು ಅರಣ್ಯ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಹೊರಿಸಿದ್ದ ಜಾಗಕ್ಕೆ ತೆರಳದಂತೆ ಅರಣ್ಯ ಸಂಚಾರಿ ದಳದ ರೇಂಜರ್ ಸಂಧ್ಯಾ ಸುನಿಲ್ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದರು. ಅಲ್ಲದೆ ಪ್ರಕರಣ ದಾಖಲಿಸುವುದಾಗಿಯೂ ಹೇಳಿದ್ದರು. ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಅಧಿಕಾರಿ ಕರಿಕಲನ್ ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಇದಾದ ಬಳಿಕ ಮಾರ್ಚ್ 2ರ ಮಧ್ಯರಾತ್ರಿ 1.30 ಸುಮಾರಿಗೆ ಅರಣ್ಯ ಅಧಿಕಾರಿ ಸಂಧ್ಯಾ ಹಾಗೂ ತಂಡ ದೂರುದಾರ ಪ್ರಸಾದ್ ಅವರ ಮನೆ ಮೇಲೆ ದಾಳಿ ಮಾಡಿದೆ. ಪ್ರಸಾದ್ ಮನೆಯಲ್ಲಿಲ್ಲದ ಸಂದರ್ಭದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮನೆಯಲ್ಲಿ ದಾಂಧಲೆ ನಡೆಸಿದ್ದಾರೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
ಮನೆಯಲ್ಲಿದ್ದ ಪ್ರಸಾದ್ ಪತ್ನಿ, ಮಗು ಹಾಗೂ ವೃದ್ಧ ತಂದೆ-ತಾಯಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸಾಮಾನ್ಯವಾಗಿ ಕೃಷಿಕರ ಮನೆಯಲ್ಲಿ ಇರುವಂತಹ ಮರ ತುಂಡರಿಸುವ ಸಣ್ಣ ಯಂತ್ರ, ಪ್ರಸಾದ್ ಅವರ ಕೆಲಸದ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮದ್ಯ ಸೇವನೆ ಮಾಡಿದ್ದರು. ಜೊತೆಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ದ.ಕ ಜಿಲ್ಲೆಯ 2ನೇ ಅತಿದೊಡ್ಡ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರದ ಸಮಸ್ಯೆ