ಮಂಗಳೂರು: ನಗರ ಪೊಲೀಸ್ ಕಮಿಷನರ್ ಮನವಿಗೆ ಕೈಜೋಡಿಸಿರುವ ದಾನಿಯೋರ್ವರು ಮಂಗಳಮುಖಿಯರಿಗೆ ಆಹಾರ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ನಗರದಲ್ಲಿ ಖಾಸಗಿ ವ್ಯಾಪಾರ ಮಾಡುವ ಅರುಣ್ ಎಂಬ ಯುವ ಉದ್ಯಮಿ ಮಂಗಳಮುಖಿಯರ ಸಂಕಷ್ಟಕ್ಕೆ ಕೈಜೋಡಿಸಿ, ತಮ್ಮ ಕುಟುಂಬ ಸದಸ್ಯರ ಸಹಾಯದೊಂದಿಗೆ 80 ಆಹಾರ ಕಿಟ್ ನೀಡಿದ್ದಾರೆ. ಈ ಕಿಟ್ನಲ್ಲಿ 10 ಕೆಜಿ ಅಕ್ಕಿ, ಬೇಳೆ, ರವೆ, ಎಣ್ಣೆ, ಟೀ ಪುಡಿ, ಸಕ್ಕರೆ, ಕಡಲೆ, ಹುರುಳಿ ಇತ್ಯಾದಿ ದಿನಸಿ ಸಾಮಾಗ್ರಿಗಳಿವೆ. ಈ ಮೂಲಕ ಸಣ್ಣ ಕುಟುಂಬವೊಂದು ತಿಂಗಳ ಕಾಲ ಜೀವನ ನಡೆಸಲು ಸಾಧ್ಯವಾಗುವಂತಹ ದಿನಸಿ ವಸ್ತು ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಾತನಾಡಿ, ಮೇ 21ರಂದು 'ಕೋವಿಡ್ ಸಮನ್ವಯ' ಎಂಬ ವೆಬಿನಾರ್ ಆಯೋಜನೆ ಮಾಡಲಾಗಿತ್ತು. ಈ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡುವವರ ವೇದಿಕೆ ಸಿದ್ಧಮಾಡಿ ಸ್ಥಳೀಯ ಅಥವಾ ವಿದೇಶದಲ್ಲಿರುವ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಎನ್ಆರ್ಐಗಳಿಗೆ ನೆರವಿನ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಬಹುದೆಂದು ಹೆಲ್ಪ್ಲೈನ್ ಸಂಖ್ಯೆ ನೀಡಲಾಗಿತ್ತು.
ಈ ಸಂಬಂಧ ಈಗಾಗಲೇ 21 ಕರೆಗಳು ಬಂದಿದ್ದು, ಎಲ್ಲರಿಗೂ ಸಹಾಯಹಸ್ತ ನೀಡಲಾಗಿದೆ. ಈ ನಡುವೆ ಮಂಗಳಮುಖಿ ಸಂಘಟನೆಯೊಂದು ಕೋವಿಡ್ ಸಮನ್ವಯ ಹೆಲ್ಪ್ಲೈನ್ಗೆ ಕರೆ ಮಾಡಿ ನೆರವು ಕೇಳಿತ್ತು. ಅವರು ವಿದೇಶದಲ್ಲಿರುವ ದಾನಿಗಳನ್ನು ಸಂಪರ್ಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಅವರು ಮಂಗಳಮುಖಿಯರಿಗೆ ನೆರವು ನೀಡುವ ದಾನಿಗಳ ಪತ್ತೆ ಕಾರ್ಯವನ್ನು ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಂಗಳೂರಿನ ಉದ್ಯಮಿ ಅರುಣ್, ತಾವು ಮಂಗಳಮುಖಿಯರಿಗೆ ಆಹಾರ ಕಿಟ್ ಒದಗಿಸುತ್ತೇನೆಂದು ಮುಂದೆ ಬಂದಿದ್ದಾರೆ ಎಂದು ಶಶಿಕುಮಾರ್ ಎನ್ ಹೇಳಿದರು. ಈ ಬಗ್ಗೆ ಮಂಗಳಮುಖಿ ಅರುಂಧತಿ ಮಾತನಾಡಿ, ಈ ಸಂದಿಗ್ಧ ಸಂದರ್ಭದಲ್ಲಿ ಆಹಾರ ಕಿಟ್ ಒದಗಿಸಿರುವ ದಾನಿ ಅರುಣ್ ಅವರಿಗೆ ಧನ್ಯವಾದಗಳು. ನಮಗೆ ಈ ಆಹಾರ ಕಿಟ್ ಒದಗಿಸಲು ನೆರವಾದ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ತಂಡಕ್ಕೂ ಧನ್ಯವಾದ ಎಂದಿದ್ದಾರೆ.