ಮಂಗಳೂರು(ದಕ್ಷಿಣ ಕನ್ನಡ): ಇಬ್ಬರನ್ನು ಕೊಲೆಗೈಯ್ಯಲು ಯತ್ನಿಸಿರುವ ಪ್ರಕರಣದಲ್ಲಿ ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐವರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಈ ತೀರ್ಪು ನೀಡಿದರು. ಮುಲ್ಕಿ ನಿವಾಸಿಗಳಾದ ವಿಕ್ಕಿ ಪೂಜಾರಿ (32), ಈತನ ಸಹೋದರ ಶಶಿ ಪೂಜಾರಿ (30), ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ (31), ಬೋಳೂರಿನ ಮೋಕ್ಷಿತ್ ಸಾಲ್ಯಾನ್ (28) ಮತ್ತು ರಾಜೇಶ್ (30) ಶಿಕ್ಷೆಗೊಳಗಾದವರು. ಪ್ರಕರಣದ ಮತ್ತೋರ್ವ ಆರೋಪಿ ಗಣೇಶ್ (28) ತಲೆಮರೆಸಿಕೊಂಡಿದ್ದಾನೆ.
ಪ್ರಕರಣದ ವಿವರ: 2015ರ ಜು. 27ರಂದು ಸಂಜೆ 6:30ರ ಸುಮಾರಿಗೆ ಕುದ್ರೋಳಿಯ ಅಳಕೆ ಮಾರ್ಕೆಟ್ ಮುಂಭಾಗ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಎಂಬಿಬ್ಬರ ಕೊಲೆ ಯತ್ನ ನಡೆದಿತ್ತು. ಅಂದಿನ ಪೊಲೀಸ್ ಅಧಿಕಾರಿಗಳಾದ ಟಿ.ಡಿ.ನಾಗರಾಜ್ ಮತ್ತು ಭಜಂತ್ರಿ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದಗಳನ್ನು ಆಲಿಸಿ ಆರೋಪಿಗಳನ್ನು 'ತಪ್ಪಿತಸ್ಥರು' ಎಂದು ಘೋಷಿಸಿದೆ.
ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 143 ಅಡಿಯಲ್ಲಿ 3 ತಿಂಗಳ ಸಾದಾ ಸಜೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಮತ್ತೆ 15 ದಿನ ಹೆಚ್ಚುವರಿ ಸಾದಾ ಸಜೆ, ಸೆಕ್ಷನ್ 149ರಡಿ 2 ವರ್ಷ ಸಾದಾ ಸಜೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ, ಸೆಕ್ಷನ್ 307ರಡಿ ಲತೇಶ್ ಕೊಲೆ ಯತ್ನಕ್ಕೆ 4 ವರ್ಷ ಶಿಕ್ಷೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಸಾದಾ ಸಜೆ, ಇಂದ್ರಜಿತ್ ಕೊಲೆ ಯತ್ನಕ್ಕೆ 4 ವರ್ಷ ಶಿಕ್ಷೆ, 2,500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತ 1.60 ಲಕ್ಷ ರೂ.ವನ್ನು ಇಂದ್ರಜಿತ್‌ನ ತಾಯಿಗೆ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರದಿಂದಲೂ ಇಂದ್ರಜಿತ್ ತಾಯಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಓ.ಎಂ.ಕ್ರಾಸ್ತಾ ವಾದಿಸಿದ್ದರು.
ಇದನ್ನೂ ಓದಿ: ಮಂಗಳೂರು: ವಂಚಕರ ಬಲೆಗೆ ಬಿದ್ದು ₹72 ಲಕ್ಷ ಪಿಂಚಣಿ ಹಣ ಕಳೆದುಕೊಂಡ ನಿವೃತ್ತ ಪ್ರಾಂಶುಪಾಲೆ