ಮಂಗಳೂರು: ಸ್ವಾತಂತ್ರ್ಯ ಹೋರಾಟದ ಇತಿಹಾಸ ಆರಂಭವಾಗುವುದೇ 1857ರ ಸಿಪಾಯಿ ದಂಗೆಯ ಮೂಲಕ. ಈ ದಂಗೆಯೇ ಬ್ರಿಟಿಷರ ದಾಸ್ಯದಿಂದ ಭಾರತ ವಿಮೋಚನೆಗೆ ನಾಂದಿ ಹಾಡಿದ್ದು ಇಂದು ಇತಿಹಾಸ. ಆದರೆ, ಅದಕ್ಕಿಂತ 20 ವರ್ಷಕ್ಕಿಂತ ಮೊದಲೇ, ಅಂದರೆ 1837ರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿತ್ತು. ಕಲ್ಯಾಣಪ್ಪನೆಂಬ ಕ್ರಾಂತಿಕಾರಿ ಹೋರಾಟಗಾರ ತನ್ನ ತಂಡದೊಂದಿಗೆ ಬ್ರಿಟಿಷರನ್ನೇ ಹಿಮ್ಮೆಟ್ಟಿಸಿದ್ದ. ಬ್ರಿಟಿಷರ ಬಾವುಟವನ್ನು ಸುಟ್ಟುಹಾಕಿ, ಸ್ವತಂತ್ರ ತುಳು ರಾಜ್ಯದ ಬಾವುಟವನ್ನು ಏರಿಸಿದ್ದ. ಬಳಿಕ ಆ ಸ್ಥಳ ಬಾವುಟಗುಡ್ಡೆ ಎಂದೇ ನಾಮಾಂಕಿತವಾಯಿತು.
ವ್ಯಾಪಾರದ ಜತೆಗೆ ಬ್ರಿಟಿಷರು ಅಧಿಪತ್ಯ ಸ್ಥಾಪನೆ ಮಾಡಲು ಶುರು ಮಾಡಿದರು. ದೇಶದ ಆಡಳಿತವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡ ಪರಿಣಾಮ ಭಾರತೀಯರು ಪರಕೀಯರ ಆಡಳಿತದಿಂದ ನರಳುವಂತಾಯಿತು. ಶೋಷಣೆ, ದೌರ್ಜನ್ಯಕ್ಕೆ ಲಕ್ಷಾಂತರ ಭಾರತೀಯರು ಬಲಿಯಾಗಬೇಕಾಯಿತು.
1837ರಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕೆನಾರ ಭಾಗ, ಅಂದರೆ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬ್ರಿಟಿಷರ ವಿರುದ್ಧ ಬಹುದೊಡ್ಡ ಸಶಸ್ತ್ರ ಹೋರಾಟವೇ ನಡೆದುಹೋಯಿತು. ಇದನ್ನು ಅಮರ ಸುಳ್ಯ ಕ್ರಾಂತಿ, ಮಂಗಳೂರು ಕ್ರಾಂತಿ, ಕೊಡಗು-ಕೆನರಾ ಬಂಡಾಯ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ, ಬ್ರಿಟಿಷರು ಮಾತ್ರ ಅದನ್ನು ಕಲ್ಯಾಣಪ್ಪನ ಕಾಟ್ ಕಾಯಿ (ಕಲ್ಯಾಣಪ್ಪನ ಫಲಕೊಡದ ಕಾಯಿ) ಎಂದು ಲೇವಡಿ ಮಾಡಿ ಪ್ರಚಾರ ಮಾಡಿದ್ದರು ಎನ್ನುತ್ತಾರೆ ಇತಿಹಾಸಕಾರರು.
1837ರ ಮಾರ್ಚ್ 29 ರಿಂದ ಎಪ್ರಿಲ್ 5ರವರೆಗೆ ಕೊಡಗಿಗೆ ಸೇರಿದ್ದ ಅಮರ ಸುಳ್ಯ ಸ್ಥಳದಿಂದ ಮಂಗಳೂರುವರೆಗೆ ಬ್ರಿಟಿಷರ ವಿರುದ್ಧ ಭಾರೀ ದೊಡ್ಡ ಮಟ್ಟದ ಕ್ರಾಂತಿ ನಡೆಯಿತು. ಈ ಕ್ರಾಂತಿಗೆ ಮುಖ್ಯ ಕಾರಣ ಸುಳ್ಯ ಪ್ರದೇಶವನ್ನು ಬ್ರಿಟೀಷರು ಕೆನರಾ ಜಿಲ್ಲೆಗೆ (ಅಂದರೆ ಈಗಿನ ದಕ್ಷಿಣ ಕನ್ನಡ) ಸೇರಿಸಿದುದು ಹಾಗೂ ಧಾನ್ಯದ ರೂಪದಲ್ಲಿ ಕೊಡಲಾಗುತ್ತಿದ್ದ ತೆರಿಗೆಯನ್ನು ನಗದು ರೂಪದಲ್ಲಿ ಕೊಡಬೇಕೆಂದು ಆದೇಶಿಸಿದ್ದು, ರೈತರಲ್ಲಿ ಹೋರಾಟದ ಕಿಚ್ಚು ಹಚ್ಚಿತು ಎನ್ನಲಾಗುತ್ತಿದೆ.
ಆ ಸಂದರ್ಭ ಬಾವುಟಗುಡ್ಡೆ ಎಂಬ ಹೆಸರಿನ ಹಿಂದೆ ಇಂತಹ ರೋಚಕ ಇತಿಹಾಸವಿದೆ ಎಂದು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ.ಉದಯ ಬಾರ್ಕೂರು ಮಾತನಾಡಿ, ಅನೇಕರಿಗೆ 1857 ರ ದಂಗೆಯೇ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಎಂದು ತಿಳಿದಿದ್ದಾರೆ. ಆದರೆ, ವಸಾಹತುಶಾಹಿ ವಿರುದ್ಧ ನಡೆದಿರುವ ಹೋರಾಟಗಳು 1757 ರ ಪ್ಲಾಸೀ ಕದನದ ನಂತರದಲ್ಲಿ ಭಾರತದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಾ ಬಂದಿತ್ತು. ಪ್ರತಿರೋಧಗಳು ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೂ, ಸ್ಥಳೀಯ ಮಟ್ಟದಲ್ಲಿ ಅಲ್ಲಿನ ನಾಯಕರ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ನಡೆಯುತ್ತಿತ್ತು. ಕರಾವಳಿಯನ್ನು ಕುರಿತು ನೋಡಿದರೆ, 1837ರಲ್ಲಿ ಅಮರಸುಳ್ಯ ಕ್ರಾಂತಿ ಕರಾವಳಿ ಕರ್ನಾಟಕದಲ್ಲಿ ಬಹು ದೊಡ್ಡಮಟ್ಟದಲ್ಲಿ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಹೊಸ ತಿರುವು ಎಂದರೆ ತಪ್ಪಿಲ್ಲ.