ಉಳ್ಳಾಲ (ದಕ್ಷಿಣಕನ್ನಡ): ಐದು ವರ್ಷದ ಹಿಂದೆ ಸಮಾಜಮುಖಿ ಕಾರ್ಯಗಳಿಗಾಗಿ ಸ್ಥಾಪನೆಯಾದ ಟೀಂ ಹನುಮಾನ್ ಎಂಬ 20 ಮಂದಿ ಯುವಕರ ತಂಡ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಗುವಿಗೆ ಧನ ಸಹಾಯ ಮಾಡಿದ್ದಾರೆ. ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ದಸರಾ ಉತ್ಸವದ ವೇಳೆ ಸಂಸ್ಥೆಯ ಸದಸ್ಯರು ವಿವಿಧ ರೀತಿಯ ವೇಷ ಧರಿಸಿ ಜನರಿಂದ ಸಂಗ್ರಹಿಸಿದ ಹಣವನ್ನು ಮಗುವಿನ ಚಿಕಿತ್ಸೆಗೆ ನೀಡಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಗುವಿಗೆ ಧನಸಹಾಯ : ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡಬಿದಿರೆಯ ಒಂದೂವರೆ ವರ್ಷ ಪ್ರಾಯದ ಶ್ರೀಯಾಳ ಚಿಕಿತ್ಸೆಗೆ ತಂಡ ವಿವಿಧ ವೇಷ ಹಾಕಿ ಧನ ಸಂಗ್ರಹ ಮಾಡಿತ್ತು. ಈ ವೇಳೆ ಸಂಗ್ರಹಿಸಿದ 1,28,479 ರೂ. ಚೆಕ್ ಅನ್ನು ಉಳ್ಳಾಲ ಪೊಲೀಸ್ ಠಾಣೆಯ ಎಸ್.ಐ ಶಿವಕುಮಾರ್ ನೇತೃತ್ವದಲ್ಲಿ ಮಗುವಿನ ಹೆತ್ತವರಿಗೆ ಹಸ್ತಾಂತರಿಸಲಾಯಿತು.
![financial-aid-for-a-child-suffering-from-cancer](https://etvbharatimages.akamaized.net/etvbharat/prod-images/16617041_thumbna.jpg)
ವಿವಿಧ ರೀತಿಯ ವೇಷ ಹಾಕಿ ಧನ ಸಂಗ್ರಹ : ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಚಿಕಿತ್ಸೆಗಾಗಿ ದಾನಿಗಳ ನೆರವು ಕೋರಿದ ಚಿತ್ರವೊಂದು ತಂಡಕ್ಕೆ ಸಿಕ್ಕಿತ್ತು. ಈ ಬಗ್ಗೆ ತಂಡದ ಸದಸ್ಯರು ತಮ್ಮ ಕೈಯಿಂದ ಆಗುವ ಸಹಾಯದ ಕುರಿತು ಚರ್ಚಿಸಿದ್ದರು. ಅಂತೆಯೇ ಸಂಘದ ಗೌರವ ಸಲಹೆಗಾರ ಪ್ರಭಾಕರ್ ಶೆಟ್ಟಿಯವರ ಸಲಹೆಯಂತೆ ದಸರಾ ಸಂದರ್ಭ ವೇಷ ಧರಿಸಿ ಹಣ ಸಂಗ್ರಹಿಸುವ ನಿರ್ಧಾರವನ್ನು ಕೈಗೊಂಡಿದ್ದರು.
ಇದಕ್ಕೆ ಪೂರಕವಾಗಿ ತಂಡದಲ್ಲಿರುವ ವಿದ್ಯಾರ್ಥಿ ಸದಸ್ಯರು ಹಾಗೂ ಯುವಕರು ತಮ್ಮದೇ ಖರ್ಚಿನಲ್ಲಿ ವಿಭಿನ್ನ ಶೈಲಿಯ ವೇಷ ಹಾಕಿ, ಟ್ಯಾಬ್ಲೋ ರಚಿಸಿ ಅದರಲ್ಲಿ ಪ್ರದರ್ಶನ ನೀಡಿ ದಸರಾ ಉತ್ಸವದಲ್ಲಿ ಹಣ ಸಂಗ್ರಹಿಸಿದ್ದರು.
![financial-aid-for-a-child-suffering-from-cancer](https://etvbharatimages.akamaized.net/etvbharat/prod-images/16617041_thumb.jpg)
ಜೊತೆಗೆ ದಾನಿಗಳಿಂದಲೂ ಹಣವನ್ನು ಸಂಗ್ರಹಿಸಿದ ತಂಡ ಒಂದು ದಿನದಲ್ಲಿ ಒಟ್ಟು ರೂ. 1,28,479 ನ್ನು ಸಂಗ್ರಹಿಸಿ ಧನಸಹಾಯ ಮಾಡಿದ್ದಾರೆ. ಟೀಂ ಹನುಮಾನ್ ಉಳ್ಳಾಲ ತಂಡದ ಅಧ್ಯಕ್ಷ ಶಿವರಂಜನ್ ಸೇರಿದಂತೆ ತಿಲಕ್, ವಿಶಾಲ್, ವರುಣ್, ಆಕಾಶ್, ಕೌಶಿಕ್, ಲವೀನ್, ರಿತೇಶ್, ಪ್ರತೀಕ್, ರಿತಿಕ್ ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದರು. ಮಗುವಿನ ಚಿಕಿತ್ಸೆಯ ಜೊತೆಗೆ ಉಳ್ಳಾಲದ ಧರ್ಮನಗರ ನಿವಾಸಿ ಬೆನ್ನಿನ ಕ್ಯಾನ್ಸರಿನಿಂದ ಬಳಲುತ್ತಿರುವ ಪದ್ಮಾವತಿ ಎಂಬವರಿಗೂ ತಂಡ ಆರ್ಥಿಕ ಸಹಾಯವನ್ನು ಮಾಡಿದೆ.
ಯುವಕರ ಮಾದರಿ ಕಾರ್ಯಕ್ಕೆ ಶ್ಲಾಘನೆ : ಚೆಕ್ ವಿತರಿಸಿದ ಉಳ್ಳಾಲ ಠಾಣೆಯ ಎಸ್.ಐ ಶಿವಕುಮಾರ್ ಮಾತನಾಡಿ, ಯುವಕರು ದಾರಿತಪ್ಪುವಂತಹ ಈ ಕಾಲಘಟ್ಟದಲ್ಲಿ ಇಂತಹ ಸಮಾಜಮುಖಿ ಸಂಘಟನೆಗಳ ಅಗತ್ಯತೆ ಸಮಾಜಕ್ಕೆ ಹೆಚ್ಚಿದೆ. ಯುವಕರನ್ನು ಒಗ್ಗೂಡಿಸಿ ಮಗುವಿನ ಚಿಕಿತ್ಸೆಯ ವೆಚ್ಚದಲ್ಲಿ ಅಲ್ಪಪಾಲು ನೀಡಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಭವಿಷ್ಯದಲ್ಲಿ ಸಂಘಟನೆ ಇನ್ನಷ್ಟು ಶೋಷಿತ ವರ್ಗಕ್ಕೆ ಆಶ್ರಯವಾಗಲಿ ಎಂದು ಹಾರೈಸಿದರು.
![financial-aid-for-a-child-suffering-from-cancer](https://etvbharatimages.akamaized.net/etvbharat/prod-images/16617041_thumbn.jpg)
ಇದನ್ನೂ ಓದಿ : ದಲಿತ ಮುಖಂಡನ ಮನೇಲಿ ಚಹಾ ಕುಡಿದ ಸಿಎಂ, ಮಾಜಿ ಸಿಎಂ