ಮಂಗಳೂರು: ನಗರದ ಹೊರವಲಯದ ವಾಮಂಜೂರು ಸಮೀಪದ ಮೂಡುಶೆಡ್ಡೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿರುವ ಘಟನೆ ನಡೆದಿದೆ. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿಗೆ ಹಾನಿ ನಡೆದಿದ್ದು, ಕಾರ್ಯಕರ್ತರನ್ನು ಚದುರಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮುಂಜಾಗೃತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮೂಡುಶೆಡ್ಡೆಗೆ ಮುಲ್ಕಿ - ಮೂಡಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆಗಮಿಸಿದ್ದರು. ಈ ವೇಳೆ ಅಲ್ಲಿ ಬಿಜೆಪಿ ಪರ ಘೋಷಣೆ ಕೇಳಿ ಬಂದಿದೆ. ಆಗ ಸ್ಥಳದಲ್ಲಿದ್ದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಘರ್ಷಣೆ ಉಂಟಾಗಿದೆ. ಪರಿಣಾಮ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ಘರ್ಷಣೆಯಲ್ಲಿ ಮಿಥುನ್ ರೈ ಕಾರಿಗೆ ಹಾನಿ ಸಂಭವಿಸಿದೆ. ಈ ವೇಳೆ ಸ್ಥಳದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಎರಡು ಪಕ್ಷದ ಕಾರ್ಯಕರ್ತರಿಂದ ಪರ ವಿರೋಧ ಘೋಷಣೆ ಕೇಳಿ ಬಂದಿದೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಮಾತನಾಡಿ, ''ಸದ್ಯ ಪರಿಸ್ಥಿತಿ ನಿಯಂತ್ರಿಸಿ ಹೆಚ್ಚುವರಿ ಭದ್ರತೆ ಹಾಕಲಾಗಿದೆ. ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೂಡುಶೆಡ್ಡೆಯಲ್ಲಿ ಚೆಕ್ಪೋಸ್ಟ್ ಹಾಕಿ ವಾಹನ ತಪಾಸಣೆ ನಡೆಸುತ್ತೇವೆ. ಎಲ್ಲಾ ವಾಹನಗಳ ಮೇಲೆ ನಿಗಾ ಇಡಲಾಗಿದೆ. ಘಟನೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿವೆ. ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ'' ಎಂದು ಹೇಳಿದರು.
''ಈಗಾಗಲೇ ಸ್ಥಳದಲ್ಲಿ ಒಂದು ಕೆಎಸ್ಆರ್ಪಿ ತುಕುಡಿ ನಿಯೋಜನೆ ಮಾಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಮತ್ತಷ್ಟು ಪೊಲೀಸರ ನಿಯೋಜನೆ ಮಾಡುತ್ತೇವೆ'' ಎಂದು ಕುಲದೀಪ್ ಕುಮಾರ್ ಜೈನ್ ಹೇಳಿದರು.
ಇದನ್ನೂ ಓದಿ: ವೋಟಿಗಾಗಿ ನೋಟು ಹಂಚಿದ ಆರೋಪ.. ಕಾಂಗ್ರೆಸ್ ಜೆಡಿಎಸ್ ನಡುವೆ ಹೊಯ್ ಕೈ