ಮಂಗಳೂರು : ಹಿಂದೆಲ್ಲಾ ಹೆಣ್ಣು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರೆ ಅದನ್ನೇ ಹೆಚ್ಚು ಎಂದು ಭಾವಿಸಲಾಗಿತ್ತು. ಒಂದಿಷ್ಟು ಕಟ್ಟುಪಾಡುಗಳಿಗೆ ತುತ್ತಾಗಿ ಅದೆಷ್ಟೋ ಮಂದಿ ಶಿಕ್ಷಣದಿಂದ ದೂರ ಉಳಿದಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ.
ಸಹಜವಾಗಿ ಪರೀಕ್ಷಾ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಒಲವು ತೋರುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಜಿ ಶಿಕ್ಷಣ ಪಡೆಯುತ್ತಿರುವವರ ಪೈಕಿ ಶೇ.68ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಮೊದಲು ಮಹಿಳಾ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯೇ ಇತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಿಜಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ.
2014-15ರಲ್ಲಿ ಒಟ್ಟು 2,146 ವಿದ್ಯಾರ್ಥಿಗಳ ಪೈಕಿ 1,425 ಮಹಿಳಾ ವಿದ್ಯಾರ್ಥಿನಿಯರು, 2015-16ರಲ್ಲಿ ಒಟ್ಟು 2,241 ವಿದ್ಯಾರ್ಥಿಗಳ ಪೈಕಿ 1,449 ವಿದ್ಯಾರ್ಥಿನಿಯರು, 2016-17 ರಲ್ಲಿ 2,284 ವಿದ್ಯಾರ್ಥಿಗಳಲ್ಲಿ 1,544 ವಿದ್ಯಾರ್ಥಿನಿಯರು, 2017-18ರಲ್ಲಿ 2,189 ವಿದ್ಯಾರ್ಥಿಗಳಲ್ಲಿ 1,546 ವಿದ್ಯಾರ್ಥಿನಿಯರು, 2018-19 ರಲ್ಲಿ 2,039 ವಿದ್ಯಾರ್ಥಿಗಳ ಪೈಕಿ 1,470 ವಿದ್ಯಾರ್ಥಿನಿಯರು, 2019-20 ರಲ್ಲಿ 2,537 ವಿದ್ಯಾರ್ಥಿಗಳಲ್ಲಿ 1,745 ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದಿದ್ದಾರೆ. 6 ವರ್ಷಗಳಲ್ಲಿ ಉನ್ನತ ಶಿಕ್ಷಣವನ್ನು ಸರಾಸರಿ ಶೇ. 68ರಷ್ಟು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ನೀಡಲಾಗುವ ವ್ಯವಸ್ಥೆ ಮತ್ತು ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿನಿಯರ ಆಸಕ್ತಿಯ ಪರಿಣಾಮ ವಿದ್ಯಾರ್ಥಿನಿಯರೇ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆಯೊಂದಿಗೆ ರಕ್ಷಣೆಯ ವ್ಯವಸ್ಥೆ ಕೂಡ ಇದೆ. ಅವರಲ್ಲಿ ಉನ್ನತ ಶಿಕ್ಷಣ ಕಲಿಕೆಗೆ ಪ್ರೋತ್ಸಾಹಿಸುವ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಅವಳಿನಗರದಲ್ಲಿ ರಸ್ತೆ ಅಗಲೀಕರಣ ಅನಿವಾರ್ಯ : ಕಟ್ಟಡಗಳ ತೆರವು ಕಾರ್ಯಾಚರಣೆ ಜೋರು
ಮೊದಲೆಲ್ಲ ಮಹಿಳಾ ವಿದ್ಯಾರ್ಥಿನಿಯರು ಡಿಗ್ರಿ ಮುಗಿಯುವ ವೇಳೆ ಮದುವೆಯಾಗಿ ಶಿಕ್ಷಣ ಸ್ಥಗಿತಗೊಳಿಸುತ್ತಿದ್ದರು. ಆದರೀಗ ವಿದ್ಯಾರ್ಥಿನಿಯರಲ್ಲಿ ತಾವು ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲ ಮೂಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದಕ್ಕೆ ಬೇಕಾದ ಪೂರಕ ವಾತಾವರಣವೂ ಇದೆ.
ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕಾಗಿ ಬರುವ ವೇಳೆ ಅವರ ಆರೋಗ್ಯ, ಹಾಸ್ಟೆಲ್ ಬಗ್ಗೆಯೂ ಯುನಿವರ್ಸಿಟಿ ಕಾಳಜಿವಹಿಸಿ ಅವರ ಕಲಿಕೆಗೆ ಮಂಗಳೂರು ವಿವಿ ಪ್ರೇರೇಪಿಸಿದೆ ಎನ್ನುತ್ತಾರೆ ವಿದ್ಯಾರ್ಥಿನಿಯರು. ಯುವಕರಿಗಿಂತ ಯುವತಿಯರು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ವಿದ್ಯಾರ್ಥಿನಿಯರು ಸಾಬೀತು ಪಡಿಸಿದ್ದಾರೆ.