ನೆಲ್ಯಾಡಿ(ದಕ್ಷಿಣ ಕನ್ನಡ): ಅಗ್ನಿ ಚಿತ್ರಕಲೆ(ಫೈರ್ ಆರ್ಟ್)ಯ ಮೂಲಕ ಜಿಲ್ಲೆಯ ನೆಲ್ಯಾಡಿಯ ಪರೀಕ್ಷಿತ್ ಎಂಬ ಯುವ ಕಲಾವಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಚಿತ್ರವನ್ನು ಫೈರ್ ಆರ್ಟ್ ಮೂಲಕ ಲೈವ್ ಚಿತ್ರೀಕರಣ ಮಾಡಿ ಸೈ ಎನಿಸಿಕೊಂಡಿದ್ದ ಪರೀಕ್ಷಿತ್‌ಗೆ ವಿಶ್ವ ಮನ್ನಣೆ ದೊರೆತಿದೆ. ಬೆಂಕಿ, ಸುಗಂಧ ದ್ರವ್ಯ, ಲಿಂಬೆ ರಸ ಹಾಗೂ ಬ್ರಶ್ ಮೂಲಕ ಬಿಳಿ ಹಾಳೆಯ ಮೇಲೆ 5 ನಿಮಿಷದಲ್ಲಿ ಚಿತ್ರ ಬಿಡಿಸಿದ್ದ ಪರೀಕ್ಷಿತ್ ಅವರಿಗೆ ಎಕ್ಸ್‌ಕ್ಲ್ಯೂಸಿವ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರಮಾಣ ಪತ್ರ ದೊರೆತಿದೆ.
ಪ್ರಪಂಚದಾದ್ಯಂತ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸುತ್ತಿರುವ ಎಕ್ಸ್‌ಕ್ಲ್ಯೂಸಿವ್ ವರ್ಲ್ಡ್ ರೆಕಾರ್ಡ್ ಈ ಬಾರಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು. ಪ್ರತಿಭಾವಂತ ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಲೈವ್ ವಿಡಿಯೋ ಮೂಲಕ ಪ್ರಸ್ತುತಪಡಿಸಬೇಕಾಗಿತ್ತು. ಇದರಲ್ಲಿ ಪರೀಕ್ಷಿತ್ ಅವರೂ ಕೂಡಾ ಭಾಗವಹಿಸಿದ್ದರು. ಅವರ ಕಲಾ ನೈಪುಣ್ಯತೆ ಪರಿಗಣಿಸಿ ಆಗಸ್ಟ್ 19 ರಂದು ಎಕ್ಸ್‌ಕ್ಲ್ಯೂಸಿವ್ ವರ್ಲ್ಡ್ ರೆಕಾರ್ಡ್ ಘೋಷಿಸಲಾಯಿತು.
ಪರೀಕ್ಷಿತ್ ನೆಲ್ಯಾಡಿಯ ಕೌಕ್ರಾಡಿ ಶ್ರೀಧರ್ ಹಾಗೂ ಸುಧಾಮಣಿ ದಂಪತಿಯ ಪುತ್ರ. ಪರೀಕ್ಷಿತ್‌ಗೆ ಆ.15ರ ಸ್ವಾತಂತ್ರ್ಯ ದಿನದಂದು ಪೇಪರ್ ಕಟ್ಟಿಂಗ್ ಆರ್ಟಿಸ್ಟ್ ಎಕ್ಸ್‌ಕ್ಲ್ಯೂಸಿವ್ ಟ್ಯಾಲೆಂಟ್ ಅವಾರ್ಡ್ 2020 ಸೇರಿ ಹಲವಾರು ಗೌರವ-ಪ್ರಶಸ್ತಿಗಳು ಸಂದಿವೆ. 2019ರಲ್ಲಿ ಪರೀಕ್ಷಿತ್ ಅವರು 3 ನಿಮಿಷ 12 ಸೆಕೆಂಡುಗಳಲ್ಲಿ ಸ್ಟೆನ್ಸಿಲ್ ಆರ್ಟ್ ಬಿಡಿಸುವ ಮೂಲಕ ವಿಶ್ವದ ವೇಗದ ಸ್ಟೆನ್ಸಿಲ್ ಆರ್ಟಿಸ್ಟ್ ಎಂದೂ ಗುರುತಿಸಿಕೊಂಡಿದ್ದರು.