ಮಂಗಳೂರು: ನಾನು ಯಾರನ್ನೂ ಟೀಕಿಸಲ್ಲ. ನಳಿನ್ ಕುಮಾರ್ ನನ್ನ ಮೇಲೆ ನೇರ ಆಪಾದನೆ ಮಾಡಿದ್ದ ಕಾರಣ, ಈಗ ಅವರ ಕಳೆದ ಹತ್ತು ವರ್ಷಗಳ ವೈಫಲ್ಯತೆಯನ್ನು ಬೊಟ್ಟು ಮಾಡಿ ತೋರಿಸುತ್ತಿದ್ದೇನೆ ಎಂದು ಮಾಜಿ ಶಾಸಕ ಜೆ ಆರ್ ಲೋಬೊ ಸಂಸದ ನಳಿನ್ ವಿರುದ್ಧ ಆರೋಪಗಳ ಸುರಿಮಳೆಗೈದರು.
ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ಸಂಸತ್ ಸದಸ್ಯರಾಗಿ ಮಂಗಳೂರಿಗೆ ನೀವು ಏನು ಕೊಡುಗೆ ಕೊಟ್ಟಿದ್ದೀರಿ. ಕೆಪಿಟಿಯಿಂದ ನಂತೂರುವರೆಗಿನ ರಸ್ತೆ ಕಾಮಗಾರಿಗೆ ಇವತ್ತಿನವರೆಗೆ ವಿನ್ಯಾಸ ಕೂಡಾ ಆಗಿಲ್ಲ ಎಂದು ಲೋಬೊ ವಾಗ್ದಾಳಿ ನಡೆಸಿದರು.
ಬಿಕರ್ನಕಟ್ಟೆ ಮೇಲ್ಸೇತುವೆಯ ಪಕ್ಕದಲ್ಲಿರುವ ಮೂಡಬಿದಿರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯು ಯಾವುದೋ ಗ್ರಾಮೀಣ ಪ್ರದೇಶದ ರಸ್ತೆಗಿಂತ ಕಿರಿದಾಗಿದೆ. ಇದನ್ನು ಸರಿಪಡಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ, ಪಂಪ್ವೆಲ್ - ತೊಕ್ಕೊಟ್ಟು ಮೇಲ್ಸೇತುವೆ ಕಳೆದು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಸಂಸದ ನಳಿನ್ಕುಮಾರ್ ವಿರುದ್ಧ ಲೋಬೊ ಕಿಡಿಕಾರಿದರು.
ಶಿರಾಡಿ-ಸಕಲೇಶಪುರಕ್ಕೆ ಹೋಗಲು ಆಸ್ಕರ್ ಫರ್ನಾಂಡೀಸ್ ಸಚಿವರಾಗಿದ್ದಾಗ ಜಪಾನ್ ತಂತ್ರಜ್ಞಾನದ ಸುರಂಗಮಾರ್ಗದ ಯೋಜನೆ ಹಾಕಲಾಗಿತ್ತು. ಸದನದಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ನಾವು ಕೂಡಾ ಸಂಪೂರ್ಣ ಬೆಂಬಲ ನೀಡಿದ್ದೆವು. ಆದರೆ ತಾವು ಈ ಬಗ್ಗೆ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ ಎಂದು ನೇರವಾಗಿ ಆರೋಪಿಸಿದರು.
ಶಿರಾಡಿ-ಸಕಲೇಶಪುರ ರಸ್ತೆಯ ಕಾಂಕ್ರೀಟೀಕರಣ ಆಸ್ಕರ್ ಫರ್ನಾಂಡೀಸ್ ಸಚಿವರಾಗಿದ್ದಾಗ ಆಗಿತ್ತು. ಆ ರಸ್ತೆ ಸಂಪೂರ್ಣವಾದಾಗ ತಮ್ಮ ಸರ್ಕಾರ ಬಂತು. ಮಾಧ್ಯಮಗಳಲ್ಲಿ ಪ್ರಚಾರ ಕೊಟ್ಟಿರಿ. ಅದು ಆಗಲು ತಮ್ಮ ಕೊಡುಗೆ ಏನು ಎಂದು ಲೋಬೋ ಪ್ರಶ್ನಿಸಿದರು.
ರಸ್ತೆಯೂ ಇಲ್ಲ, ರೈಲ್ವೆ ನಿಲ್ದಾಣವೂ ಇಲ್ಲ, ವಿಮಾನ ನಿಲ್ದಾಣವೂ ಖಾಸಗಿಯವರಿಗೆ!
ಡಿ ವಿ ಸದಾನಂದ ಗೌಡರು ರೈಲ್ವೆ ಸಚಿವರಾಗಿದ್ದಾಗ ಮಂಗಳೂರಿಗೆ ಅಂತಾರಾಷ್ಟ್ರೀಯ ರೈಲ್ವೆ ನಿಲ್ದಾಣ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಅದು ಭರವಸೆಯಾಗಿಯೇ ಉಳಿದಿದೆ. ತಾವು ಒಂದು ಹೆಜ್ಜೆ ಮುಂದೆ ಇಡಲಿಲ್ಲ. ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಣೆ ಮಾಡುವ ಭರವಸೆ ನೀಡಿದ್ದೀರಿ. ಆದರೆ ಅದನ್ನು ಈಗ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದ್ದೀರಿ. ನವಮಂಗಳೂರು ಬಂದರನ್ನು ಖಾಸಗೀಕರಣ ಮಾಡಲು ಹೊರಟಿದ್ದೀರಿ. ಪುದು ಕೋಕನಟ್ ರಿಸರ್ಚ್ ಸೆಂಟರನ್ನು ಹೈದರಾಬಾದ್ಗೆ ವರ್ಗಾವಣೆ ಮಾಡಲು ಹೊರಟಿದ್ದೀರಿ ಎಂದು ಮಾಜಿ ಶಾಸಕ ಲೋಬೊ ದೂರಿದರು.
ವಿಜಯಾ ಬ್ಯಾಂಕ್ಅನ್ನಾದರೂ ಉಳಿಸಿದ್ದೀರಾ?
ಕಳೆದ ಬಾರಿ ಡಿಫೆನ್ಸ್ ಮಿನಿಸ್ಟರ್ ಬಂದಾಗ ಕೋಸ್ಟ್ಗಾರ್ಡ್ ಅಕಾಡೆಮಿಯನ್ನುಇಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅದರ ಬಗ್ಗೆ ಇವತ್ತಿನವರೆಗೆ ನೀವು ಚಕಾರ ಎತ್ತಿಲ್ಲ. ಎಸ್ಇಝಡ್ ಎರಡನೇ ಯೋಜನೆ ನಿಂತುಹೋಗಲು ನಳಿನ್ ಕುಮಾರ್ರವರೇ ಕಾರಣ. ಮಂಗಳೂರಿನ ಕೈಗಾರೀಕರಣವನ್ನು ಸಂಪೂರ್ಣವಾಗಿ ತಡೆದವರು ಅವರೇ. ಯಾವುದೇ ಐಐಟಿಯಾಗಲಿ, ಕೇಂದ್ರ ಅಕಾಡೆಮಿಯನ್ನಾಗಲೀ ಅವರು ಮಂಗಳೂರಿಗೆ ತಂದಿಲ್ಲ. ಕೊನೆಯ ಪಕ್ಷ ನಮ್ಮ ಜಿಲ್ಲೆಯ ವಿಜಯ ಬ್ಯಾಂಕನ್ನಾದರೂ ಉಳಿಸಿದಿರಾ ಎಂದು ಪ್ರಶ್ನಿಸಿದರು.
ಯಾವ ಪುರುಷಾರ್ಥಕ್ಕೆ ನೀವು ಸಂಸತ್ ಸದಸ್ಯರಾದಿರಿ. ಯಾವ ದೃಷ್ಟಿಯಿಂದ ನಂ 1 ಸಂಸತ್ ಸದಸ್ಯರು. ಬಿಜೆಪಿಯವರು ಜನರ ಭಾವನೆಗಳನ್ನು ಕೆರಳಿಸಿ, ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿ ಮುಂದೆ ಬರಲು ಪ್ರಯತ್ನಿಸುತ್ತಿದ್ದೀರಿ. ಆದರೆ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ತಂದಿಲ್ಲ ಎಂದು ಲೋಬೊ ಅವರು ನಳಿನ್ ವಿರುದ್ಧ ಹರಿಹಾಯ್ದರು.
ಪಂಪ್ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ನೀವೇ ಕಾರಣ
ಇನ್ನು ಸಂಸದ ನಳಿನ್ ಕುಮಾರ್ ಅವರು ಇತ್ತೀಚೆಗೆ ಕೋಟೆಕಾರ್ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿ, ತೊಕ್ಕೊಟ್ಟು ಮತ್ತು ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಲು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹಾಗೂ ಅಂದಿನ ಶಾಸಕರಾದ ಜೆ ಆರ್ ಲೋಬೊ ಕಾರಣ. ಅವರಿಬ್ಬರೂ ಅವರ ಸಮುದಾಯದವರಿಗೆ ಸಹಾಯ ಮಾಡಲು ಈ ಎರಡೂ ಮೇಲ್ಸೇತುವೆಗಳ ವಿನ್ಯಾಸ ಬದಲಾಯಿಸಿ, ಈ ಕಾಮಗಾರಿಗಳಿಗೆ ಬೇಕಾದ ಭೂಸ್ವಾಧೀನವನ್ನು ವಿಳಂಬ ಮಾಡಿಸಿ, ಕಾಮಗಾರಿ ನಡೆಯದಂತೆ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ. ಆದರೆ ನಾನು ಕಳೆದ ಐದು ವರ್ಷಗಳಲ್ಲಿ ಶಾಸಕನಾಗಿದ್ದಾಗ ನಳಿನ್ ಕುಮಾರ್ ಕಟೀಲು ನಂತೂರು ಹಾಗೂ ಪಂಪ್ವೆಲ್ ಸರ್ಕಲ್ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಎಷ್ಟು ಸಭೆ ಕರೆದಿದ್ದರು. ದಾಖಲೆಗಳಿದ್ದರೆ ಅವರು ಕೊಡಲಿ. ಹತ್ತು ವರ್ಷಗಳಲ್ಲಿ ವಿನ್ಯಾಸ ಬದಲಾವಣೆ ಆದದ್ದು ಇವರಿಗೆ ತಿಳಿದಿಲ್ಲವೇ? ಇವತ್ತು ಇದರ ಬಗ್ಗೆ ಗೊತ್ತಾಗಿದೆಯಾ ಎಂದು ಲೋಬೊ ಪ್ರಶ್ನಿಸಿದರು.
ಒಂದು ವೇಳೆ ನಾನು ಶಾಸಕನಾಗಿ ವಿನ್ಯಾಸವನ್ನು ಬದಲಾಯಿಸಲು ಕಾರಣಕರ್ತನಾಗಿದ್ದರೆ, ಅಥವಾ ಶಿಫಾರಸು ಮಾಡಿದ್ದರೆ, ನಳಿನ್ ಕುಮಾರ್ ಕಟೀಲು ತಾವು ನಂಬುವ ಯಾವುದೇ ದೈವ ದೇವರುಗಳ ಮುಂದೆ ಪ್ರಮಾಣ ಮಾಡಲಿ. ನಾನೂ ಕೂಡ ನಾನು ನಂಬುವ ದೇವರ ಮುಂದೆ ಪ್ರಮಾಣ ಮಾಡಿ ಒಂದೇ ಒಂದು ಬಾರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ನನ್ನನ್ನು ನೀವು ಕರೆದಿಲ್ಲ. ಯಾವುದೇ ವಿನ್ಯಾಸ ಬದಲಾಯಿಸಲು ಶಿಫಾರಸು ನಾನು ಮಾಡಿಲ್ಲ. ಇದರ ಸಂಪೂರ್ಣ ವಿಫಲತೆಯ ಜವಾಬ್ದಾರಿ ನಿಮ್ಮ ತಲೆಯ ಮೇಲಿದೆ ಎಂದರು.
ನೀವು ಯಾರ ಮಗುವನ್ನು ಎತ್ತಿ ಆಡಿಸುತ್ತಿದ್ದೀರಿ!
ಯು ಟಿ ಖಾದರ್ ಅವರು ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತಿದ್ದಾರೆ. ನಾವು ಹುಟ್ಟಿಸಿದ ನಮ್ಮ ಮಕ್ಕಳನ್ನು ಅವರು ಎತ್ತಿ ಆಡಿಸುತ್ತಿದ್ದಾರೆ. ನಿಮ್ಮ ಏಳು ಶಾಸಕರು ನಾವು ಶಾಸಕರಾಗಿದ್ದ ಸಂದರ್ಭ ಅಡಿಗಲ್ಲು ಹಾಕಿದ ಯೋಜನೆಗಳಿಗೆ ಈಗ ನೀವು ಹೋಗಿ ಅಡಿಗಲ್ಲು ಹಾಕಿ ಬೀಗುತ್ತಿದ್ದೀರಲ್ಲಾ, ನೀವು ಯಾರ ಮಗುವನ್ನು ಎತ್ತಿ ಆಡಿಸುತ್ತಿದ್ದೀರಿ. ಒಂದು ಸರಿಯಾದ ಅನುದಾನವನ್ನು ತರುವ ಸಾಮರ್ಥ್ಯ ನಿಮ್ಮ ಶಾಸಕರಿಗಿಲ್ಲ. ನಾವು ಅನುದಾನ ತಂದಿರುವ ಕಾಮಗಾರಿಗಳನ್ನು ನೀವು ಉದ್ಘಾಟನೆ ಮಾಡುತ್ತಿದ್ದೀರಿ. ನೀವೇ ಅನುದಾನ ತಂದ ಹಾಗೆ ಫ್ಲೆಕ್ಸ್ಗಳನ್ನು ಹಾಕುತ್ತಿದ್ದೀರಿ. ಇದು ಯಾವ ರೀತಿಯ ಆಟ ನಿಮ್ಮದು. ನಾವು ಹುಟ್ಟಿಸಿದ ಮಕ್ಕಳಿಗೆ ನೀವು ಯಾಕೆ ತಂದೆ ತಾಯಿಗಳೆಂದು ಹೋಗುತ್ತಿದ್ದೀರಿ ಎಂದು ಲೋಬೊ ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಕುಲಶೇಖರದಿಂದ ಕನ್ನಗುಡ್ಡೆವರೆಗಿನ ರೈಲ್ವೇ ಹಳಿಯ ಪಕ್ಕದ ರಸ್ತೆಯನ್ನು ಅಭಿವೃದ್ಧಿ ಮಾಡಲು ನಿಮಗೆ ಸಾಧ್ಯವಾಗಿಲ್ಲ. 25 ವರ್ಷದಿಂದ ನೀವು ಸಚಿವರಾರಾಗಿದ್ದೀರಿ, ನಿಮ್ಮ ಶಾಸಕರಿದ್ದರು. ಆದರೆ ರಸ್ತೆ ಅಭಿವೃದ್ಧಿ ಮಾಡಲು ನಿಮ್ಮಿಂದ ಸಾಧ್ಯವಾಗಿಲ್ಲ. ನಾನು ಶಾಸಕನಾಗಿದ್ದಾಗ ಅದಕ್ಕೆ ಬೇಕಾದ ಅನುದಾನವನ್ನು ತರಿಸಿ ಕೆಲಸ ಮಾಡಿದಾಗ ತಾವು ಏನು ಮಾಡಿದಿರಿ? ಸಂಸತ್ನಲ್ಲಿ ಇದರ ಬಗ್ಗೆ ಪ್ರಶ್ನಿಸಿದಿರಿ. ಇಲ್ಲಿ ಕೆಲಸ ಮಾಡದ ರೀತಿಯಲ್ಲಿ ಒಂದೂವರೆ ವರ್ಷ ವಿಳಂಬ ಮಾಡಿಸಿದಿರಿ. ನಾನು ತಮಗೆ ಗೊತ್ತಿಲ್ಲದ ರೀತಿಯಲ್ಲಿ ನನ್ನ ವೈಯಕ್ತಿಕ ಪರಿಚಯದ ಮೂಲಕ ರೈಲ್ವೇ ಬೋರ್ಡ್ಗೆ ಸಂಪರ್ಕ ಮಾಡಿ, ಅದಕ್ಕೆ ಅನುಮತಿ ಪಡೆದು ಆ ರಸ್ತೆಯ ಕೆಲಸ ಮಾಡಿಸಿದೆ. ಇವತ್ತು ಉದ್ಘಾಟನೆಯ ಸಂದರ್ಭ ನೀವು ನಿಮ್ಮ ಶಾಸಕರು ಫ್ಲೆಕ್ಸ್ ಹಾಕಿ ಬೀಗುತ್ತಿದ್ದೀರಿ ಎಂದು ಲೋಬೋ ನಳಿನ್ ಕುಮಾರ್ರನ್ನು ಛೇಡಿಸಿದರು.