ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಿಲ್ಲವ, ಬಂಟ, ಕುಲಾಲ, ಗಟ್ಟಿ, ಕೊಟ್ಟಾರಿ ಗಾಣಿಗ ಸೇರಿದಂತೆ ಎಲ್ಲಾ ಜಾತಿಗಳ ಅಭಿವೃದ್ಧಿ ನಿಗಮವಾಗಲಿ ಎಂದು ಮಾಜಿ ಸಚಿವ ಯುಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಮರಾಠ ಮತ್ತು ವೀರಶೈವ ನಿಗಮ ಮಂಡಳಿ ಮಾಡುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ.
ಶಿರಾ ಉಪಚುನಾವಣೆಗೋಸ್ಕರ ಗೊಲ್ಲರ ಅಭಿವೃದ್ಧಿ ಮಂಡಳಿ, ಬಸವಕಲ್ಯಾಣಗೋಸ್ಕರ ಅಲ್ಲಿ ಮರಾಠಿಗರು ಜಾಸ್ತಿ ಇರುವುದರಿಂದ ಮರಾಠಿ ಅಭಿವೃದ್ಧಿ ನಿಗಮ ಮಾಡಲಾಗುತ್ತಿದೆ. ಉಪಚುನಾವಣೆಗೋಸ್ಕರ ಈ ರೀತಿಯ ಘೋಷಣೆಗಳನ್ನು ಮಾಡುವು ಮೂಲಕ ಆಡಳಿತಾರೂಢ ಬಿಜೆಪಿ ಪಕ್ಷ ಮತ ಬ್ಯಾಂಕ್ ಸೃಷ್ಟಿಸುತ್ತಿದೆ ಎಂದು ಹರಿಹಾಯ್ದರು.
ನಿಗಮ ಮಂಡಳಿಗೆ ನಮ್ಮ ವಿರೋಧವಿಲ್ಲ. ಜಿಲ್ಲೆಯ ಎಲ್ಲಾ ಜಾತಿಗಳ ಅಭಿವೃದ್ಧಿ ಮಂಡಳಿಯನ್ನು ಚುನಾವಣೆಗೆ ಬರುವವರೆಗೆ ಕಾಯದೆ ಮಾಡಲಿ ಎಂದು ಸವಾಲು ಹಾಕಿದರು.
ಯಾರನ್ನು ರಕ್ಷಿಸಲು ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊಲೆ, ಹಲ್ಲೆ ಪ್ರಕರಣ ಹೆಚ್ಚುತ್ತಿದೆ. ಸಚಿವರು ಈವರೆಗೆ ಪೊಲೀಸ್ ಇಲಾಖೆಯ ರಿವ್ಯೂ ಮಾಡಲಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಅಯ್ಯಪ್ಪ ಸನ್ನಿಧಾನಕ್ಕೆ ತೆರಳುವ ಭಕ್ತರಿಗೆ ಕೊರೊನಾ ಬಗ್ಗೆ ಜಾಗೃತಿ ಮತ್ತು ಸವಲತ್ತುಗಳನ್ನು ನೀಡಬೇಕು. ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಸಿಂಗಲ್ ವಿಂಡೋ ತೆರೆಯಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.