ಕಡಬ: ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಕೊಂಬಾರು ಗ್ರಾಮದ ಬಿಳಿನೆಲೆ ಸಮೀಪದ ಪುತ್ತಿಲ ಎಂಬಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆ ಮೃತಪಟ್ಟಿದ್ದು, ಇದಕ್ಕೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ ಆರೋಪ ವ್ಯಕ್ತವಾಗಿದೆ.
ಅರಣ್ಯ ಇಲಾಖೆಯ ಯಾವುದೇ ಜಾಗದಲ್ಲಿ ಹಾದು ಹೋಗುವ ವಿದ್ಯುತ್ ಲೈನ್ಗಳಿಗೆ ಸುರಕ್ಷಾ ಕವಚ ಹಾಕದಿರುವುದೇ ಕಾಡಾನೆ ಬಲಿಯಾಗಲು ಕಾರಣವಾಗಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಆರೋಪಿಸಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆಯನ್ನು ಹೊಣೆಯಾಗಿಸಿ ಇವರ ವಿರುದ್ಧ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈ ಇಲಾಖೆಗಳ ವಿರುದ್ಧ ಹೈಕೋರ್ಟ್ನಲ್ಲಿ ಪಿಐಎಲ್ ಹಾಕಲಾಗುವುದು ಎಂದಿದ್ದಾರೆ.
ಮಾತ್ರವಲ್ಲದೆ ಈ ಕಾಡಾನೆ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಕೃತ್ಯಕ್ಕೆ ಕಾರಣವಾದ ಇಲಾಖೆ ಅಥವಾ ಸಿಬ್ಬಂದಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಮುಂದಕ್ಕೆ ಈ ರೀತಿಯ ಘಟನೆ ಮತ್ತೆ ಮರುಕಳಿಸಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ನೀಡಿದೆ.