ಪುತ್ತೂರು: ತಾಲೂಕಿನ 22 ಗ್ರಾಮ ಪಂಚಾಯತ್‌ಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, 322 ಸ್ಥಾನಗಳಿಗೆ ನಡೆಯಲಿರುವ ಈ ಚುನಾವಣೆಯಲ್ಲಿ 731 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
ಶನಿವಾರ ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲಿರುವ ಚುನಾವಣಾ ಸಿಬ್ಬಂದಿಗೆ ಮಸ್ಟರಿಂಗ್ ಕಾರ್ಯ ನಡೆಯಿತು. 22 ಗ್ರಾಮ ಪಂಚಾಯತ್‌ಗಳ ಒಟ್ಟು 106 ವಾರ್ಡ್ಗಳಿಗೆ ಚುನಾವಣೆ ನಡೆದು 343 ಸದಸ್ಯರ ಆಯ್ಕೆಯಾಗಬೇಕಾಗಿತ್ತು. ಈ ಪೈಕಿ 8 ಗ್ರಾಮ ಪಂಚಾಯತ್‌ಗಳ 21 ಸ್ಥಾನಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆದಿರುವುದರಿಂದ ಉಳಿದ 322 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
731 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ತಾಲೂಕಿನಲ್ಲಿ 55,024 ಪುರುಷ, 56,029 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,11,053 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ತಾಲೂಕಿನ 106 ವಾರ್ಡ್ಗಳ ಪೈಕಿ 3 ವಾರ್ಡ್ಗಳಿಗೆ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉಳಿದ 103 ಶಾಶ್ವತ ಮತಗಟ್ಟೆಗಳ ಜೊತೆಗೆ 42 ಹೆಚ್ಚುವರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಒಟ್ಟು 145 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಓದಿ: ಯುಕೆಯಿಂದ ರಾಜ್ಯಕ್ಕೆ ಆಗಮಿಸಿದ 14 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್
ಚುನಾವಣೆಯಲ್ಲಿ ಯಶಸ್ವಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ 725 ಮತಗಟ್ಟೆ ಅಧಿಕಾರಿಗಳು ಹಾಗೂ 80 ಮೀಸಲು ಅಧಿಕಾರಿಗಳು ಸೇರಿದಂತೆ ಒಟ್ಟು 805 ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಒಟ್ಟು 200 ಪೊಲೀಸ್ ಸಿಬ್ಬಂದಿಯನ್ನು ನೇಮೀಸಲಾಗಿದೆ. ಪ್ರತಿಯೊಂದು ಮತಗಟ್ಟೆಗೆ 5 ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಕಗೊಳಿಸಲಾಗಿದೆ. ಚುನಾವಣಾ ಪ್ರಕ್ರಿಯೆಯ ಸಾಗಾಟಕ್ಕಾಗಿ 28 ಕೆಸ್ಆರ್ಟಿಸಿ ಬಸ್ಗಳು, 8 ಮ್ಯಾಕ್ಸಿಕ್ಯಾಬ್ ಮತ್ತು 7 ಜೀಪುಗಳನ್ನು ನಿಯೋಜನೆಗೊಳಿಸಲಾಗಿದೆ.
ತಾಲೂಕಿಗೆ ಒಟ್ಟು 6 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪ್ರತಿಯೊಬ್ಬ ಅಧಿಕಾರಿಗಳಿಗೆ ತಲಾ 25 ಮತಗಟ್ಟೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ತಾಲೂಕಿನಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾ.ಪಂನಲ್ಲಿ 3 ಮತ್ತು ಕುಂಬ್ರದಲ್ಲಿ 2 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಹಾಗೂ 35 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, 105 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ.
ಕೋವಿಡ್-19 ಕೊರೊನಾ ಪೀಡಿತರಿಗೆ ಸಂಜೆ 4 ಗಂಟೆಯಿಂದ 5 ಗಂಟೆಯತನಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅವರು ಪಿಪಿಇ ಕಿಟ್‌ನೊಂದಿಗೆ ಸಂಪೂರ್ಣ ಸುರಕ್ಷತೆಯಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.