ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ಗಳಿಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಚುನಾವಣೆ ಶಾಂತಿಯುತವಾಗಿ ನಡೆಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 30ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನವೆಂಬರ್ 2ರಂದು ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆ ತೆಗೆದುಕೊಳ್ಳಲು ನವೆಂಬರ್ 4 ಕೊನೆಯ ದಿನವಾಗಿದೆ ಎಂದರು.
ನವೆಂಬರ್ 12 ಮತದಾನ ನಡೆಯಲಿದ್ದು ನವೆಂಬರ್ 14ರಂದು ಮತ ಎಣಿಕೆ ಮಂಗಳೂರಿನ ರೊಸಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. 60 ವಾರ್ಡ್ಗಳಿಗೆ 448 ಮತಗಟ್ಟೆಗಳಿದ್ದು, 3,87,517 ಮತದಾರರು ಇದ್ದಾರೆ. ಪ್ರತಿ ಅಭ್ಯರ್ಥಿಗೆ 3ಲಕ್ಷ ರೂ ವೆಚ್ಚದ ಮಿತಿ ಇದೆ ಎಂದರು.
ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದ್ದು ಪರವಾನಗಿ ಹೊಂದಿದ ಆಯುಧಗಳನ್ನು ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇಡಲು ಕ್ರಮ ಕೈಗೊಳ್ಳಲಾಗಿದೆ ರೌಡಿಗಳಿಗೆ ಸದ್ವರ್ತನೆಯಿಂದ ವರ್ತಿಸುವಂತೆ ಸೂಚಿಸಲಾಗಿದೆ. ನಗರದ 24 ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.