ಪುತ್ತೂರು: ಕಾಂಕ್ರೀಟ್ ಛಾವಣಿಯ ಕಟ್ಟಡದೊಳಗೆ ಅಧ್ಯಯನ ನಿರತರಾಗುವ ವಿದ್ಯಾರ್ಥಿಗಳಿಗೆ ಬೇಸಿಗೆ ಕಾಲದಲ್ಲಿ ಆಗುವ ಸೆಖೆ ಸಮಸ್ಯೆಯಂತೂ ಹೇಳುವುದೇ ಬೇಡ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪೂರಕವಾದ ವ್ಯವಸ್ಥೆಯೊಂದು ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಮಾಡಲಾಗಿದೆ.
ಹೌದು, ಬಿಸಿಲಿನ ಧಗೆಯಿಂದ ಪಾರಾಗಲು ಮತ್ತು ಕಾಲೇಜಿನಲ್ಲಿ ಕೊಠಡಿ ಕೊರತೆ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವಿ ಪೂರ್ವ ವಿಭಾಗದ ಬಳಿ ಕಂಗಿನ ಸೋಗೆಯಿಂದ ಪರಿಸರ ಪ್ರೇಮಿ ಕುಟೀರವನ್ನು ನಿರ್ಮಾಣ ಮಾಡಲಾಗಿದೆ. ಮರದ ಕಂಬಗಳು ಹಾಕಿ, ಅದರ ಮೇಲೆ ಸೋಗೆಯ ಛಾವಣಿ ನಿರ್ಮಿಸಲಾಗಿದೆ. ಉದ್ಯಾವನಕ್ಕೆ ಹಾಕುವ ಹಸಿರು ಪರದೆಯನ್ನು ಕುಟೀರದ ಸುತ್ತಲೂ ಗೋಡೆಯ ರೀತಿ ಕಟ್ಟಲಾಗಿದೆ.
ಕೊಠಡಿಯ ಕೊರತೆಯ ಬಗ್ಗೆ ಗಮನ ಸೆಳೆಯುವ ಪ್ರಯತ್ನ:
ಬೇಸಿಗೆಯಲ್ಲಿ ತಂಪಗಿನ ಸ್ಥಳದಲ್ಲಿ ಕೂತು ವಿದ್ಯಾರ್ಥಿಗಳಿಗೆ ಪಾಠ ಕೇಳಲು ಈ ಪರಿಸರ ಸ್ನೇಹಿ ಕುಟೀರ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗ್ತಿದ್ದರೂ ಇದರ ಹಿಂದೆ ಕೊಠಡಿ ಕೊರತೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶವಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ವಿದ್ಯಾ ಸಂಸ್ಥೆಯ ಕಾಲೇಜು ವಿಭಾಗಕ್ಕೆ ತರಗತಿ ಕೊಠಡಿಗಳ ಕೊರತೆಯಿದೆ. ಕಲಾ, ವಾಣಿಜ್ಯ, ವಿಜ್ಞಾನ ಹೀಗೆ ಮೂರು ವಿಭಾಗಗಳು ಇರುವ ಕಾಲೇಜಿಗೆ 6 ತರಗತಿ ಕೊಠಡಿಗಳು, 3 ಪ್ರಯೋಗಾಲಯ ಕೊಠಡಿ, 1 ಗ್ರಂಥಾಲಯ ಕೊಠಡಿ, 1 ಕಂಪ್ಯೂಟರ್ ಕೊಠಡಿ ಸೇರಿದಂತೆ ಒಟ್ಟು 11 ಕೊಠಡಿಗಳ ಕೊರತೆಯಿದೆ. ಪ್ರೌಢ ಶಾಲಾ ವಿಭಾಗದಿಂದ 3 ಕೊಠಡಿಗಳನ್ನು ಎರವಲು ಪಡೆದು ಕಾಲೇಜು ವಿಭಾಗದ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ, ಬೇಸಿಗೆ ಸಮಯದಲ್ಲಿ ಕುಟೀರ ನಿರ್ಮಿಸಿ ಮಕ್ಕಳಿಗೆ ಪಾಠ ಹೇಳುವ ಮೂಲಕ ಕೊಠಡಿ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಗ್ತಿದೆ.