ಬೆಳ್ತಂಗಡಿ (ದಕ್ಷಿಣ ಕನ್ನಡ): ಕಳೆದ 40 ವರ್ಷಗಳಿಂದ ಆ್ಯಂಬುಲೆನ್ಸ್ ಚಾಲಕರಾಗಿದ್ದು, ಪ್ರಸ್ತುತ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಆರೈಕೆಯಲ್ಲಿರುವ ಚಾರ್ಮಾಡಿ ಗ್ರಾಮದ ಗೇಟ್ ಬಳಿ ನಿವಾಸಿ ಭರತ್ ಅವರಿಗೆ ಅಖಿಲ ಕರ್ನಾಟಕ ಆ್ಯಂಬುಲೆನ್ಸ್ ಚಾಲಕರ ಮತ್ತು ಮಾಲೀಕರ ಸಂಘ (ಎ.ಕೆ.ಎ.ಇ.ಎಸ್.ಟಿ) ಅವರ ವತಿಯಿಂದ 50 ಸಾವಿರ ರೂ. ಗಳ ಆರ್ಥಿಕ ನೆರವು ಮತ್ತು ಆಹಾರ ಸಾಮಾಗ್ರಿಗಳ ಕಿಟ್ನನ್ನು ಸೆ. 6 ರಂದು ನೀಡಿದೆ.
ಭರತ್ ಅವರು ಮಂಗಳೂರು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿ ಕಳೆದ 40 ವರ್ಷಗಳಿಂದ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಚಾಲಕರಾಗಿ ದುಡಿಯುತ್ತಾ, ಹಿರಿಯ ಚಾಲಕರಾಗಿ ಗುರುತಿಸಿಕೊಂಡಿದ್ದರು. ತನ್ನ ಕರ್ತವ್ಯದ ವೇಳೆಯಲ್ಲಿ ಅವರು ತುರ್ತು ಸಂದರ್ಭದಲ್ಲಿ ಅನೇಕ ಮಂದಿಯ ಪ್ರಾಣರಕ್ಷಣೆಯ ಜೊತೆಗೆ ಅನೇಕ ಮಂದಿಯ ಮೃತದೇಹ ಸಾಗಾಟ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದರು.
ಮಾರ್ಚ್ ತಿಂಗಳ ಲಾಕ್‌ಡೌನ್ ದಿನಗಳ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಕೆಲಸ ಮಾಡಲು ಅಶಕ್ತರಾಗಿರುವ ಅವರು ಇದೀಗ ಮನೆಯಲ್ಲೇ ನೆಲೆಸಿದ್ದು, ಆರ್ಥಿಕ ತೊಂದರೆಯಿಂದ ಇದ್ದರು. ಇದನ್ನು ಮನಗಂಡ ಸಂಘದ ಸದಸ್ಯರು ಚಾರ್ಮಾಡಿಯ ಭರತ್ ಅವರ ಮನೆಗೆ ತೆರಳಿ ನೆರವು ನೀಡುವ ಮೂಲಕ ಸಹೋದ್ಯೋಗಿಗೆ ಸ್ಪಂದನೆ ನೀಡಿದ್ರು.
ವಾಟ್ಸ್ ಆಪ್ ಮೂಲಕ ದೇಣಿಗೆ ಸಂಗ್ರಹ:
ಆ್ಯಂಬುಲೆನ್ಸ್ ಚಾಲಕರ ಶ್ರೇಯೋಭಿವೃದ್ಧಿಗಾಗಿ ಪಣ ತೊಟ್ಟಿರುವ ಎ.ಕೆ.ಎ.ಇ.ಎಸ್.ಟಿ ಸಂಘಟನೆ ವಾಟ್ಸ್ ಆಪ್ ಮೂಲಕ ದೇಣಿಗೆ ಸಂಗ್ರಹಿಸಿದ್ದು, ಇದರಲ್ಲಿ ಒಟ್ಟು 75 ಸಾವಿರ ರೂ. ಸಂಗ್ರಹವಾಗಿದೆ. ಈ ಮೊತ್ತದಲ್ಲಿ ಭರತ್ ಅವರಿಗೆ 50 ಸಾವಿರ ರೂ. ಮತ್ತು ಉಳಿಕೆ 25 ಸಾವಿರ ರೂ. ಗಳನ್ನು ಬೆಂಗಳೂರಿನಲ್ಲಿ ಆ. 1 ರಂದು ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಆ್ಯಂಬುಲೆನ್ಸ್ ಚಾಲಕ ರಾಜೇಶ್ ಅವರಿಗೆ ನೀಡಲು ತೀರ್ಮಾನಿಸಿದೆ.