ಕಡಬ(ದಕ್ಷಿಣ ಕನ್ನಡ): ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗಂಡು ಮಗುವಿನ ಜನನಕ್ಕೆ ಕಾರಣನಾಗಿದ್ದಲ್ಲದೆ, ಬಳಿಕ ಮಗು ತನ್ನದಲ್ಲ ಎಂದು ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆರೋಪದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ತನಗೆ ನಂಬಿಸಿದ ಯುವಕ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಗಂಡು ಮಗು ಜನಿಸಿದ್ದು, ಆದರೆ ಬಳಿಕ ಮಗು ತನ್ನದಲ್ಲ ಎಂದು ತನ್ನ ಶೀಲದ ಮೇಲೆ ಅನುಮಾನಪಟ್ಟಿದ್ದಾನೆ ಎಂದು ಯುವಕನ ವಿರುದ್ಧ ಯುವತಿಯು ವರದಕ್ಷಿಣೆ ಕಿರುಕುಳ, ನಿಂದನೆ ಆರೋಪ ಹೊರಿಸಿ ದೂರು ನೀಡಿದ್ದಾಳೆ. ದೀಕ್ಷಿತ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿಗೆ ಸಂಬಂಧಿಯೂ ಆದ ಆರೋಪಿ ದೀಕ್ಷಿತ್, ಆಗಾಗ ಆಕೆಯ ಮನೆಗೆ ಬರುತ್ತಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಬಳಿಕ ಆರೋಪಿಯು ಕೆಲಸದ ನಿಮಿತ್ತ ದೂರದೂರಿಗೆ ತೆರಳಿದ್ದ. ಕೆಲ ತಿಂಗಳ ನಂತರ ಯುವತಿಗೆ ತಾನು ಗರ್ಭವತಿಯಾಗಿರುವುದು ತಿಳಿದಿದ್ದು, ಆಕೆಯು ಇಬ್ಬರ ಮನೆಯವರಿಗೂ ಈ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಮನೆಯವರು ವಿವಾಹ ಮಾಡಲು ನಿರ್ಧರಿಸಿದ್ದರು.
ಬಳಿಕ ಕುಟ್ರುಪ್ಪಾಡಿಯ ಆಶಾ ಕಾರ್ಯಕರ್ತೆಗೂ ಯುವಕ ಬರವಣಿಗೆ ಮೂಲಕ ಸ್ವತಃ ಒಪ್ಪಿಕೊಂಡು ಸಹಿ ಮಾಡಿ ಕಳುಹಿಸಿದ್ದ. ಅಲ್ಲದೆ ಯುವಕನು ಊರಿಗೆ ಬಂದು ಯುವತಿಯ ಮನೆಯವರೊಂದಿಗೆ ಮಾತುಕತೆ ನಡೆಸಿ, ನಂತರ ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯೂ ಆಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ಮದುವೆ ಬಳಿಕ ಮರಳಿ ಕೆಲಸಕ್ಕೆ ತೆರಳಿದ್ದು, ಇದೀಗ ದೂರವಾಣಿ ಮೂಲಕ ತನ್ನನ್ನು ಸಂಪರ್ಕಿಸಿ ನಿನಗೆ ಹುಟ್ಟಿದ ಮಗು ನನ್ನದಲ್ಲ. ನಾನು ನಿನಗೆ ಡಿಎನ್ಎ ಟೆಸ್ಟ್ ಮಾಡಿಸುತ್ತೇನೆ. ನಿನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ನಿಂದಿಸಿ ವರದಕ್ಷಿಣೆ ಕೊಡಬೇಕು ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಯುವತಿಯು ದೂರು ನೀಡಿದ್ದಾಳೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ. 376.498(A) 504.506.R/W 34 IPC And 3.4 D P ಆ್ಯಕ್ಟ್ನಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ತಂದೆಯ ಕ್ರೌರ್ಯ: ಜೀವನ್ಮರಣದಲ್ಲೂ ತಂದೆಯ ರಕ್ಷಣೆಗೆ ಸುಳ್ಳು ಹೇಳಿದ್ದ ಮಗ!