ಮಂಗಳೂರು : ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಆದ್ದರಿಂದ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿ ದೊಡ್ಡ ಮಟ್ಟದ ಲಾಕ್ ಡೌನ್ ಆಗದಂತೆ ಸಹಕರಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮನವಿ ಮಾಡಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ, ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿ, ಕೋವಿಡ್ ಎರಡನೇ ಅಲೆ ಆದಷ್ಟು ಶೀಘ್ರ ನಿಯಂತ್ರಣಕ್ಕೆ ಬರುವಂತೆ ಜನತೆ ಸಹಕರಿಸಬೇಕು ಎಂದರು.
ಯಾವುದೇ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸುವಂತಿಲ್ಲ. ವಸತಿಯುತ ಕಾಲೇಜಿನ ವಿದ್ಯಾರ್ಥಿಗಳನ್ನೂ ಕಾಲೇಜು ಆಡಳಿತ ಮಂಡಳಿ ಮನೆಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಈ ಮೊದಲೇ ಈ ಬಗ್ಗೆ ಆದೇಶಿಸಿದ್ದರೂ, ಕೆಲವೊಂದು ಕಾಲೇಜುಗಳಲ್ಲಿ ಇನ್ನೂ ತರಗತಿಗಳು ನಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ. ಅಂತಹ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಮೆಡಿಕಲ್ ವಿದ್ಯಾರ್ಥಿಗಳ ಅವಶ್ಯಕತೆ ಇರುವುದರಿಂದ ಮೆಡಿಕಲ್ ಕಾಲೇಜಿನ ಕೊನೆಯ ವಿಭಾಗದ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಇದನ್ನು ಬಿಟ್ಟು ಬೇರೆ ಯಾವುದಾದರೂ ಕಾಲೇಜುಗಳು ತರಗತಿ ನಡೆಸಿದಲ್ಲಿ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಓದಿ : ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ, ಜನ ಎಚ್ಚರಿಕೆಯಿಂದ ಇರಿ : ಉಡುಪಿ ಜಿಲ್ಲಾಧಿಕಾರಿ
ಆಹಾರ, ಆರೋಗ್ಯ, ಕಟ್ಟಡ ನಿರ್ಮಾಣ ಕಾಮಗಾರಿ ವಸ್ತುಗಳು ದೊರೆಯುವ ಅಂಗಡಿಗಳು ಹೊರತುಪಡಿಸಿ, ಇನ್ನಿತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮೇ.4ರವರೆಗೆ ಕಡ್ಡಾಯವಾಗಿ ಬಂದ್ ಮಾಡಬೇಕು. ಹೋಟೆಲ್, ಬಾರ್ಗಳಲ್ಲಿ ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ. ಆದರೆ, ಇಲ್ಲಿ ಸಿಬ್ಬಂದಿ ಕೋವಿಡ್ ನಿಯಮ ಪಾಲನೆ ಮಾಡಿ ತಮ್ಮ ಕೆಲಸ ನಿರ್ವಹಿಸಬೇಕು ಎಂದರು.