ಪುತ್ತೂರು(ದಕ್ಷಿಣಕನ್ನಡ): ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಹಾಡಿ ಹೊಗಳಿದ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಜಿ.ಪಂ.ಕ್ಷೇತ್ರ ವ್ಯಾಪ್ತಿಯ ಈಶ್ವರಮಂಗಲದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಾರಂಭಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಂಸದ-ಸಚಿವರಿಗೆ ಕಾಪುವಿನಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಸಭೆಗೆ ತಡವಾಗುತ್ತದೆ ಎಂಬ ಕಾರಣಕ್ಕೆ ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆಗೆ ಮಾತನಾಡಲು ಅವಕಾಶ ನೀಡಿರಲಿಲ್ಲ.
ಇದರಿಂದ ಸಿಡಿದೆದ್ದ ಅನಿತಾ ಹೇಮನಾಥ ಶೆಟ್ಟಿ ನನಗೂ ಮಾತನಾಡಲು ಅವಕಾಶ ನೀಡಿ ಎಂದು ಕಾರ್ಯಕ್ರಮ ಆಯೋಜಕರಲ್ಲಿ ತಿಳಿಸಿದಾಗ ಅವಕಾಶ ನೀಡಲಾಯಿತು. ಈ ವೇಳೆ ಕಾಂಗ್ರೆಸ್ ಸರ್ಕಾರ ಈ ಪ್ರಾಥಮಿಕ ಕೇಂದ್ರಕ್ಕೆ ಅನುದಾನ ನೀಡಿದ್ದು, ನನ್ನ ಪ್ರಯತ್ನದಿಂದ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದೆ. ಇದಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಆರೋಗ್ಯ ಇಲಾಖೆಯ ಅಧಿಕಾರಿಗಳ ಸಹಕಾರವಿದೆ ಎಂದು ಸ್ಮರಿಸಿಕೊಂಡರು.
ಆದರೆ, ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ಇವರ ಭಾಷಣ ಕೇಳಿಸಿಕೊಳ್ಳದೆ ಎದ್ದು ಹೋದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತ್ರ ನಿಂತುಕೊಂಡು ಅವರ ಭಾಷಣ ಆಲಿಸಿದರು.