ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಪತ್ನಿಗೆ ಹಲ್ಲೆ ನಡೆಸಿ ಅವರನ್ನು ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿ ಪತಿಗೆ ಏಳು ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಧರ್ಮಸ್ಥಳ ನೆರಿಯ ಗ್ರಾಮದ ನೆರಿಯಕಾಡು ಕೊಟ್ಟಕ್ಕರ ನಿವಾಸಿ ಜಾನ್ಸನ್ ಕೆ.ಎಂ(41) ಶಿಕ್ಷೆಗೊಳಗಾದ ಅಪರಾಧಿ.
2021 ರ ಜ.7 ರಂದು ರಾತ್ರಿ ಜಾನ್ಸನ್ ಪತ್ನಿ ಸೌಮ್ಯ ಫ್ರಾನ್ಸಿಸ್ (36) ರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ, ದೊಣ್ಣೆಯಿಂದ ಹೊಡೆದಿದ್ದನು. ಗಂಭೀರ ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಸೌಮ್ಯ ಅವರ ಸೋದರ ಬೆಳ್ತಂಗಡಿ ಠಾಣೆಯಲ್ಲಿ ನೀಡಿರುವ ದೂರಿನಂತೆ ಐಪಿಸಿ 498(ಎ) ಹಾಗೂ 302ರನ್ವಯ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಧರ್ಮಸ್ಥಳ ಠಾಣೆಗೆ ವರ್ಗಾಯಿಸಲ್ಪಟ್ಟಿತ್ತು. ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಡಾ. ಸೂರಜ್ ಶೆಟ್ಟಿಯವರು ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆ ನಡೆಸಿ ಆರೋಪಿ ತಪ್ಪಿತಸ್ಥ ಎಂದು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರಾಧಿ ಪತಿಗೆ ಐಪಿಸಿ 498 (ಎ) ರಡಿ ಮೂರು ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6ತಿಂಗಳು ಸಜೆ, ಐಪಿಸಿ 302ರಡಿ 7ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ. ಅಪರಾಧಿ ಏಕಕಾಲಕ್ಕೆ ಈ ಎಲ್ಲ ಶಿಕ್ಷೆ ಅನುಭವಿಸಬಹುದಾಗಿದೆ. ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.
ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ - ಆರೋಪಿ ಬಂಧನ: ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಜಲ್ಲಿಗುಡ್ಡೆ ನಿವಾಸಿ ಲಿಖಿತ್ (19)ನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಕುಟುಂಬ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿತ್ತು. ಪ್ರೌಢಶಾಲೆಗೆ ತೆರಳುತ್ತಿದ್ದ ಸಂತ್ರಸ್ತ ಬಾಲಕಿಗೆ ಇನ್‌ಸ್ಟಾಗ್ರಾಂ ಮೂಲಕ ಆರೋಪಿ ಲಿಖಿತ್ ಪರಿಚಯವಾಗಿದ್ದನು. ಪರಿಚಯ ಸಲುಗೆ ಬೆಳೆದು ಇಬ್ಬರೂ ಆತ್ಮೀಯರಾಗಿದ್ದರು. ಈ ಮಧ್ಯೆ ಆರೋಪಿ ಅಪ್ರಾಪ್ತೆಯನ್ನು ಅಪಹರಿಸಿದ್ದನು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ಲಿಖಿತ್ ತನ್ನ ಗೆಳೆಯನ ಬಾಡಿಗೆ ಕೊಠಡಿಯಲ್ಲಿ ಕೂಡಿ ಹಾಕಿರುವುದನ್ನು ಪತ್ತೆ ಹಚ್ಚಿದ್ದರು. ಸಂತ್ರಸ್ತೆಯನ್ನು ರಕ್ಷಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಅಪಹರಣ, ದೌರ್ಜನ್ಯ, ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಯ ಹೆಸರಲ್ಲಿ ಪ್ರೇಮಿ- ಇಬ್ಬರು ಸ್ನೇಹಿತರಿಂದ ಬಾಲಕಿ ಮೇಲೆ ಅತ್ಯಾಚಾರ... ಐವರು ಬಾಲಕರು ಸೇರಿ ಆರು ಜನರ ಬಂಧನ!