ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಬೀದಿನಾಯಿಗಳಿಗೆ ಆಹಾರ ನೀಡುವ ರಾಜೇಶ್ ಬನ್ನೂರು ಅವರಿಗೆ ಒಂದು ಕ್ವಿಂಟಲ್ ಅಕ್ಕಿಯನ್ನು ಪುತ್ತೂರಿನ ಕೊಂಬೆಟ್ಟು ತಾಲೂಕು ಮೈದಾನದ ಬಳಿ ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ್ ರೆಂಜ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಸಿ. ನಾರಾಯಣ್, ಕಳೆದ 15 ವರ್ಷಗಳಿಂದ ಸುಮಾರು 150ಕ್ಕೂ ಮಿಕ್ಕಿ ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವ ರಾಜೇಶ್ ಬನ್ನೂರು ಅವರ ಸೇವೆಯನ್ನು ಪರಿಗಣಿಸಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ಏಳು ವರ್ಷ ತುಂಬಿದ ಸಂಭ್ರಮದಲ್ಲಿ ಸೇವಾ ಹಿ ಸಂಘಟನ್ ಕಾರ್ಯಕ್ರಮದಡಿಯಲ್ಲಿ ಈ ಸೇವೆಯನ್ನು ಮಾಡಲಾಗಿದೆ ಎಂದರು.
ಪುತ್ತೂರು ನಗರ ಬಿಜೆಪಿ ಅಧ್ಯಕ್ಷರಾದ ಜಗನ್ನಿವಾಸ ರಾವ್ ಮಾತನಾಡಿ, ಜಿಲ್ಲಾ ಒಬಿಸಿ ಮೋರ್ಚಾ ಹತ್ತಾರು ಜನಪರ ಹಾಗೂ ಸೇವಾಕಾರ್ಯವನ್ನು ಕೊರೊನಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಾಗೂ ಪುತ್ತೂರಿನಲ್ಲಿ ನಡೆಸಿದೆ, ಅವರಿಗೆ ಅಭಿನಂದನೆಗಳು ಎಂದರು. ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಿಲ್ಲಾ ಯುವ ಮೋರ್ಚಾ ಸದಸ್ಯ ಕಿರಣ್ ಶಂಕರ್ ಮಲ್ಯ, ಸೂರ್ಯಕುಮಾರ್, ರಿಸರ್ವ್ ಬ್ಯಾಂಕ್ ನಿವೃತ್ತ ಅಧಿಕಾರಿ ಶೀನ ನಾಯ್ಕ್ ದಂಪತಿ ಉಪಸ್ಥಿತರಿದ್ದರು.