ಸುಬ್ರಹ್ಮಣ್ಯ: ಪ್ರಾಚೀನ ಕಾಲದಿಂದಲೂ ನಡೆದು ಬರುತ್ತಿರುವ ಮತ್ತು ವರ್ಷದಲ್ಲಿ ಒಂದೇ ಬಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತೆಗೆಯುವ ’ಮೂಲಮೃತಿಕೆ ಪ್ರಸಾದ’ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತೆಗೆದು ಭಕ್ತರಿಗೆ ವಿತರಿಸಲಾಯಿತು.
ನಾಗದೋಷ ಪರಿಹಾರಕ್ಕೆ ಮತ್ತು ನಾಗಾರಾಧನೆಗೆ ಪ್ರಸಿದ್ಧವಾದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತಿಕೆ (ಹುತ್ತದ ಮಣ್ಣು)ನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಇಂದು ತೆಗೆಯಲಾಯಿತು. ದೇಗುಲದ ಗರ್ಭಗುಡಿಯಿಂದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವಿವಿಧ ವೈದಿಕ ವಿಧಿ-ವಿಧಾನಗಳೊಂದಿಗೆ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲ ಪ್ರಸಾದ ತೆಗೆದರು.
ಕ್ಷೇತ್ರದ ಮೂಲ ಸ್ಥಾನವಾದ ಗರ್ಭಗುಡಿಯಿಂದ ಈ ಮೃತಿಕೆ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರು ತೆಗೆದು ಭಕ್ತಾದಿಗಳಿಗೆ ನೀಡುವುದು ಪಾರಂಪರಿಕವಾಗಿ ನಡೆದು ಬಂದ ಆಚಾರ. ಇದು ಮೂಲ ಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಮಹಾಪ್ರಸಾದವೂ ಆಗಿದೆ. ಯಾವುದೇ ದೇಗುಲದಲ್ಲಿ ಕೂಡ ಇಂತಹ ಮೂಲಮೃತಿಕೆ ಪ್ರಸಾದ ದೊರಕುವುದಿಲ್ಲ ಎನ್ನಲಾಗಿದೆ. ಇದು ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಭಕ್ತರಿಗೆ ದೊರಕುವುದು ಎಂಬುದು ಈ ಕ್ಷೇತ್ರದ ವಿಶೇಷವಾಗಿದೆ.
ಓದಿ: ಕೇಂದ್ರ-ರಾಜ್ಯ ಸರ್ಕಾರಗಳ ಕಾಯ್ದೆಗಳಿಗೆ ನಮ್ಮ ವಿರೋಧವಿದೆ: ಹೆಚ್.ಡಿ.ರೇವಣ್ಣ
ಮೂಲಮೃತಿಕೆ ಪ್ರಸಾದವನ್ನು ವರ್ಷದಲ್ಲಿ ಒಂದು ಬಾರಿ ಮಾತ್ರ ತೆಗೆಯಲಾಗುವುದು. ಈ ಮೃತಿಕೆ ಪ್ರಸಾದವು ರೋಗ ನಿರೋಧಕ, ಸಂತಾನಕಾರಕ ಮತ್ತು ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ನಂಬಿಕೆ. ಕ್ಷೇತ್ರದ ಈ ಮುಖ್ಯ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗಾಗಿ ಮತ್ತು ಹಲವು ರೋಗಗಳ ನಿವಾರಣೆಗಾಗಿ ಭಕ್ತರು ಕೊಂಡೊಯ್ಯುತ್ತಾರೆ. ಇದನ್ನು ತೀರ್ಥದಲ್ಲಿ ಸೇವಿಸುವುದರ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾದಿಗಳು ಈ ಪ್ರಸಾದವನ್ನು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಆದರೆ ಇದನ್ನು ಶರೀರದಲ್ಲಿ ಇರಿಸಿಕೊಂಡಾಗ ಅಪವಿತ್ರವಾಗದಂತೆ ನೋಡಿಕೊಳ್ಳುವುದು ಭಕ್ತರ ಕರ್ತವ್ಯ ಎನ್ನಲಾಗಿದೆ.