ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಿತ್ಯವೂ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತರು ಹಸಿವಿನಿಂದ ಇರಬಾರದು ಎಂದು ಊಟದ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ಸೋಂಕಿನ ಭೀತಿಯಿಂದ ಅನ್ನಪೂರ್ಣ ಭೋಜನ ಶಾಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿ, ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಗುತ್ತಿದೆ.
ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು, ಶುಚಿತ್ವಕ್ಕೆ ಸಾಕಷ್ಟು ಆದ್ಯತೆ ನೀಡಿ ಭಕ್ತರಿಗೆ ಭೋಜನ ನೀಡಲಾಗುತ್ತಿದೆ. 120 ಮಂದಿ ಕುಳಿತುಕೊಳ್ಳುವ ಪಂಕ್ತಿಯಲ್ಲಿ ಕೇವಲ 50 ಮಂದಿಯನ್ನು ಮಾತ್ರ ಕೂರಿಸಲಾಗುತ್ತಿದೆ. ಇಡೀ ಅನ್ನಛತ್ರದಲ್ಲಿ ಸಾಮಾಜಿಕ ಅಂತರಕ್ಕೆ ಪೂರಕವಾಗಿ 2000 ಮಂದಿ ಕುಳಿತುಕೊಳ್ಳವ ಜಾಗದಲ್ಲಿ ಇದೀಗ ಕೇವಲ 600-700 ಮಂದಿ ಕುಳಿತು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.
ಅನ್ನಪೂರ್ಣ ಭೋಜನ ಶಾಲೆ ಪ್ರವೇಶಿಸುವಾಗಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ವೃತ್ತಾಕಾರದ ಮಾರ್ಕ್ಗಳನ್ನು ಹಾಕಲಾಗಿದ್ದು, ಭಕ್ತರು ಅಂತರ ಕಾಯ್ದುಕೊಂಡೇ ಭೋಜನಶಾಲೆ ಪ್ರವೇಶಿಸಬೇಕಾಗಿದೆ. ಭೋಜನ ಶಾಲೆಯ ಒಳಪ್ರವೇಶ ದ್ವಾರದಲ್ಲಿ ಅರ್ಧಗಂಟೆಗೊಮ್ಮೆ ಕ್ರಿಮಿನಾಶಕ ಸಿಂಪಡಣೆ ಮಾಡಿ ಶುಚಿತ್ವಕ್ಕೆ ಬಹಳಷ್ಟು ಗಮನ ಕೊಡಲಾಗುತ್ತಿದೆ. ಸಾಮಾಜಿಕ ಅಂತರದೊಂದಿಗೆ ಭಕ್ತರು ಭೋಜನ ಸ್ವೀಕರಿಸಲು ಕುಳಿತುಕೊಳ್ಳಲು ನೆರವಾಗಲು ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಬಗ್ಗೆ ಅನ್ನಪೂರ್ಣ ಭೋಜನ ಶಾಲೆಯ ವ್ಯವಸ್ಥಾಪಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಈಟಿವಿ ಭಾರತದೊಂದಿಗೆ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅನ್ನಪೂರ್ಣ ಭೋಜನ ಶಾಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ, ಭಕ್ತರಿಗೆ ಅನ್ನದಾನ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವೆಂದು ಶೇ.50ರಷ್ಟು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಸಿಬ್ಬಂದಿಗೆ ಮಾಸ್ಕ್ ಕಡ್ಡಾಯವಾಗಿದ್ದು, ಆಹಾರ ತಯಾರಿಸುವಾಗ ಶುಚಿತ್ವಕ್ಕೆ ಹೆಚ್ಚಿನ ಗಮನಕೊಡಲಾಗುತ್ತಿದೆ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಸ್ಯಾನಿಟೈಸರ್ನಲ್ಲಿ ಕೈ ಶುಚಿಗೊಳಿಸಿ 10 ನಿಮಿಷಗಳ ಬಳಿಕ ಕೈಯನ್ನು ಸರಿಯಾಗಿ ತೊಳೆದು ತಮ್ಮ ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ತಿಳಿಸಿದರು.