ಪುತ್ತೂರು : ಪುತ್ತೂರಿನ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಸಂದರ್ಭದಲ್ಲಿ ಹಲವು ಕಡೆ ನಮ್ಮ ಕರ್ತವ್ಯಕ್ಕೆ ವಿವಿಧ ರೀತಿಯಲ್ಲಿ ಅಡ್ಡಿಪಡಿಸುತ್ತಿರುವುದು ನಮ್ಮ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಆಗುತ್ತಿದೆ ಎಂದು ಪುತ್ತೂರು ನಗರಸಭೆಯ ಪೌರ ಕಾರ್ಮಿಕರು ಅವಲತ್ತುಕೊಂಡಿದ್ದಾರೆ. ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಪೌರ ಕಾರ್ಮಿಕರು ತಿಳಿಸಿದ್ದಾರೆ.
ಸೆ.5ರಂದು ಕೃಷ್ಣನಗರದಲ್ಲಿ ರಸ್ತೆ ಬದಿಯಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಲು ನಗರಸಭೆಯಿಂದ ಸಿಸಿ ಕ್ಯಾಮೆರಾ ಅಳವಡಿಸುತ್ತಿರುವ ಸಂದರ್ಭ ಅಪರಿಚಿತ ವ್ಯಕ್ತಿಗಳು ರಿಕ್ಷಾದಲ್ಲಿ ಬಂದಿದ್ದರು. ತ್ಯಾಜ್ಯ ಎಸೆಯುವುದನ್ನು ಪ್ರಶ್ನಿಸಿ ದಂಡಪಾವತಿಸಲು ತಿಳಿಸಿದಾಗ, ಸುಮಾರು 20 ಮಂದಿ ಗುಂಪು ಸೇರಿ ಪೊಲೀಸರ ಎದುರೇ ನಮ್ಮ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ನಾವು ಪುತ್ತೂರು ನಗರಸಭಾ ವ್ಯಾಪ್ತಿಯ ಸ್ವಚ್ಛತೆ, ನಗರ ನೈರ್ಮಲ್ಯ ಸೇರಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿ ಕರ್ತವ್ಯವನ್ನು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಯಾವುದೇ ಹೆಚ್ಚಿನ ಫಲಾಪೇಕ್ಷೆ ಬಯಸದೇ ಕೇವಲ ವೇತನಕ್ಕಾಗಿ ದುಡಿಯದೆ ಸ್ವಚ್ಛ ಪುತ್ತೂರು ನಿರ್ಮಾಣದ ಗುರಿಯನ್ನಿಟ್ಟುಕೊಂಡು ದುಡಿಯುತ್ತಿದ್ದೇವೆ. ಪುತ್ತೂರು ನಗರಸಭೆಯಲ್ಲಿ ಸ್ವಚ್ಛತಾ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದ ಭಾಗದವರಾಗಿದ್ದಾರೆ. ತಮ್ಮ ಮನೆ-ಮಠ, ಮಕ್ಕಳು, ಜಮೀನುಗಳನ್ನು ತಮ್ಮೂರಿನಲ್ಲಿ ಬಿಟ್ಟು ಪುತ್ತೂರಿನ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದರು.