ಬಂಟ್ವಾಳ: ಒಂದು ಕಡೆ ಬಡತನ, ಮತ್ತೊಂದು ಕಡೆ ಅಂಗ ವೈಕಲ್ಯ ಇವೆಲ್ಲವನ್ನೂ ಮೀರಿ ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ ಭಾಗ್ಯಶ್ರೀ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 467 ಅಂಕ ಪಡೆದು ಸಾಧನೆ ಮಾಡಿದ್ದಾಳೆ. ಮನಸ್ಸಿದ್ರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನುಅವರು ತೋರಿಸಿಕೊಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಪುತ್ರಿ ಭಾಗ್ಯಶ್ರೀ. ತಂದೆ ಕೇಶವ ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಆದರೂ ಜೀವನಾಧಾರಕ್ಕೆ ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿ ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ತಾಯಿಗೆ ಬೀಡಿ ಕಟ್ಟುವುದೇ ಕಾಯಕ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಕಲಿತು ಅಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಾಳೆ. ಅಮ್ಮ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಸ್.ಎಸ್.ಎಲ್.ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿರುವ ಬಾಲಕಿ, ಮುಂದೆ ಪಿಯುಸಿಗೆ ಎಸ್.ವಿ.ಎಸ್ ಪದವಿಪೂರ್ವ ಕಾಲೇಜನ್ನು ಸೇರಿದ್ದಳು. ಇಲ್ಲೂ ಇವಳದ್ದು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ.
ತಾಯಿ ರಿಕ್ಷಾ ಬಾಡಿಗೆ ಮಾಡಿಕೊಂಡು ಬಂದು ಮಗಳನ್ನು ಎತ್ತಿಕೊಂಡೇ ಬಂದು ಕಾಲೇಜಿಗೆ ಬಿಡುತ್ತಿದ್ದರು. ಅಲ್ಲಿ ವೀಲ್ ಚೇರ್ನಲ್ಲಿಯೇ ಇವಳ ಕಲಿಕೆ ಸಾಗುತ್ತಿತ್ತು. ಅವಳ ಸ್ನೇಹಿತೆಯರು ಕೂಡಾ ಬಿಡುವಿನ ಹೊತ್ತಿನಲ್ಲಿ ಇವಳನ್ನು ವೀಲ್ ಚೇರ್ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದು, ಎಲ್ಲರೂ ಅವಳನ್ನು ಪ್ರೀತಿಸುವವರೇ ಆಗಿದ್ದರು. ತಾನು ಇನ್ನೊಬ್ಬರ ಮೇಲೆ ಅವಲಂಬಿತಳಾಗಬಾರದು ಎನ್ನುವ ಕಾರಣಕ್ಕಾಗಿ ಎರಡು ಮರದ ತುಂಡನ್ನು ಹಿಡಿದುಕೊಂಡು ಒಂದು ಫ್ಲೋರ್ನಿಂದ ಇನ್ನೊಂದು ಫ್ಲೋರ್ಗೆ ಹತ್ತಿ ಇಳಿಯುತ್ತಿದ್ದುದನ್ನು ನೋಡಿದಾಗ ಎಲ್ಲರ ಕರುಳು ಚುರಕ್ ಎನ್ನುತ್ತಿತ್ತು. ಇಂತಹ ಅಂಗವೈಕಲ್ಯ ಇದ್ದರೂ ಅವಳ ಸಾಧನೆಗೆ ಅದು ಅಡ್ಡಿಯಾಗಲಿಲ್ಲ.
ವಾಣಿಜ್ಯ ವಿಭಾಗದಲ್ಲಿ 467 ಅಂಕಗಳನ್ನು ಪಡೆದಿರುವುದು ಸಣ್ಣ ಸಾಧನೆಯೂ ಅಲ್ಲ. ನನ್ನ 12 ವರ್ಷಗಳ ವಿದ್ಯಾಭ್ಯಾಸದಲ್ಲಿಯೂ ನನ್ನ ಬೆನ್ನೆಲುಬಾಗಿ, ನನ್ನನ್ನು ಎತ್ತಿಕೊಂಡೇ ಬಂದು ಅಮ್ಮ ಸಹಾಯ ಮಾಡಿದ್ದಾರೆ. ಅವರಿಂದಾಗಿ ನಾನು ಇಷ್ಟು ಕಲಿಯಲು ಸಾಧ್ಯವಾಯಿತು. ಇನ್ನು ಮನೆಯಲ್ಲಿಯೇ ಇದ್ದು ದೂರ ಶಿಕ್ಷಣದಲ್ಲಿ ಬಿ.ಕಾಂ. ಕಲಿಯಬೇಕು ಎಂಬ ಆಸೆ ನನ್ನದು. ನನ್ನ ಸ್ನೇಹಿತರು, ಉಪನ್ಯಾಸಕರು ನನಗೆ ಒಳ್ಳೆಯ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ ಎನ್ನುತ್ತಾಳೆ ಭಾಗ್ಯಶ್ರೀ