ಮಂಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮಹಿಳೆಯರು ನಿತ್ಯ ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತ ಗಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ವಿಪರೀತ ಹಣ ವಸೂಲಿ ಮಾಡುತ್ತಿರುವ ಟೋಲ್ ಗೇಟ್ ವಿರುದ್ಧ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಅವರು ಜನರ ಪರವಾಗಿ ಧ್ವನಿಯೆತ್ತಿದರೆ, ಅವರ ಫೋಟೋ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ವಿ ಸೋಮಣ್ಣ ಅವರು ಮಹಿಳೆಗೆ ಹೊಡೆಯುತ್ತಾರೆಂದರೆ ಅದು ಸರ್ಕಾರದ ಆಡಳಿತ ವೈಖರಿಯನ್ನು ತೋರಿಸುತ್ತದೆ. ಹೀಗಾಗಿ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿದರು.
ಸಿಲಿಂಡರ್ ಬೆಲೆ ದುಬಾರಿ: ದಿನದಿಂದ ದಿನಕ್ಕೆ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಬಡವರು ಕಷ್ಟ ಎದುರಿಸುತ್ತಿದ್ದು, ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೂ ಸಿಲಿಂಡರ್ ಗ್ಯಾಸ್ ಬೆಲೆ ಬಿಸಿ ತಟ್ಟಿದೆ.