ಬೆಳ್ತಂಗಡಿ: ತಮ್ಮ ಧರ್ಮದ ಮರ್ಮವನ್ನರಿತು ಇತರ ಧರ್ಮಗಳನ್ನೂ ಗೌರವಿಸಿದಾಗ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಗುರುವಾರ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ 89ನೆ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. 'ಬದುಕು ಮತ್ತು ಬದುಕಲು ಬಿಡು' ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ. ಸತ್ಯ, ಅಹಿಂಸೆ, ತ್ಯಾಗ, ಪರರ ಸೇವೆಯಿಂದ ಜೀವನ ಪಾವನವಾಗುತ್ತದೆ ಎಂದು ಭಗವಾನ್ ಮಹಾವೀರರು ಬೋಧಿಸಿದ್ದಾರೆ. ಸಾಧಿಸಿ ತೋರಿಸಿದ್ದಾರೆ. ಲೋಕಸಭೆ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಸರ್ವಧರ್ಮಗಳ ಸಮನ್ವಯದಿಂದಲೇ ಲೋಕ ಕಲ್ಯಾಣ ಸಾಧ್ಯ ಎಂಬ ಆಶಯ ವ್ಯಕ್ತಪಡಿಸಲಾಗಿದೆ. ಧರ್ಮದ ತತ್ವ, ಸಿದ್ಧಾಂತಗಳನ್ನು ಅರಿತು ಬದುಕಿನಲ್ಲಿ ಪಾಲನೆ ಮಾಡಿದರೆ ಎಲ್ಲರಲ್ಲಿಯೂ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆದು ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಪವಿತ್ರ ಕ್ಷೇತ್ರ ಧರ್ಮಸ್ಥಳದ ಸೇವೆ - ಸಾಧನೆ ಶ್ಲಾಘನೀಯವಾಗಿದೆ ಎಂದು ಹೆಗ್ಗಡೆಯವರನ್ನು ರಾಜ್ಯಪಾಲರು ಅಭಿನಂದಿಸಿದರು.
ಎಲ್ಲಾ ಧರ್ಮಗಳೂ ಸಮಾನವಾಗಿದ್ದು, ಧರ್ಮದ ಮೂಲಕ ವಿಶ್ವ ಶಾಂತಿ ಮತ್ತು ವಿಶ್ವಕಲ್ಯಾಣ ಸಾಧ್ಯವಾಗುತ್ತದೆ. ಎಲ್ಲರೂ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಂಡು ವಿಶ್ವಮಾನವರಾಗಬೇಕು. ಆಗ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಮೂಡಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಚತುರ್ವಿಧ ದಾನ ಧರ್ಮಸ್ಥಳದಲ್ಲಿ ನಿತ್ಯೋತ್ಸವ: ವೀರೇಂದ್ರ ಹೆಗ್ಗಡೆ
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಲಕ್ಷದೀಪೋತ್ಸವ ಸಂದರ್ಭದಲ್ಲಿ ಕಳೆದ 88 ವರ್ಷಗಳಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದಲ್ಲಿ ಅನೇಕ ವಿದ್ವಾಂಸರು ಸರ್ವಧರ್ಮಗಳ ಸಾರವನ್ನು ಸಂದೇಶ ರೂಪದಲ್ಲಿ ನೀಡಿ ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 5 ಲಕ್ಷದ 55 ಸಾವಿರ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು 50 ಲಕ್ಷ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಬ್ಯಾಂಕುಗಳಿಂದ ಸ್ವ-ಸಹಾಯ ಸಂಘಗಳಿಗೆ 14 ಸಾವಿರ ಕೋಟಿ ರೂ. ಹಣವನ್ನು ವ್ಯವಹಾರಕ್ಕಾಗಿ ಒದಗಿಸಲಾಗಿದೆ. ಜೀವನ ಮಧುರ ಪಾಲಿಸಿಯ ಮೂಲಕ 20 ಲಕ್ಷ ಮಂದಿಗೆ ವಿಮಾ ರಕ್ಷೆ ಒದಗಿಸಲಾಗಿದೆ.
ಧರ್ಮೋತ್ಥಾನ ಟ್ರಸ್ಟ್ ಮೂಲಕ 259 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರಗೊಳಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 843 ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳದಿಂದ 14 ಕೋಟಿ ರೂ. ನೆರವು ನೀಡಲಾಗಿದೆ. ವೈದ್ಯಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳಿಗೆ 61 ಕೋಟಿ 23 ಲಕ್ಷ ರೂ. ನೆರವು ನೀಡಲಾಗಿದೆ. 585 ಆರ್ ಸೆಟಿಗಳಲ್ಲಿ 5 ಲಕ್ಷಕ್ಕೂ ಮಿಕ್ಕಿ ಯುವಕ –ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ. ಶಾಂತಿವನ ಟ್ರಸ್ಟ್ ಮೂಲಕ ಯೋಗ, ನೈತಿಕ ಶಿಕ್ಷಣ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಪ್ರೋತ್ಸಾಹ ನೀಡಲಾಗುತ್ತದೆ. ಜೊತೆಗೆ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಬೆಂಗಳೂರಿನ ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಜಿ. ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.