ಬೆಳ್ತಂಗಡಿ: ಆಗಸ್ಟ್ 5 ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದ ಐತಿಹಾಸಿಕ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶುಭ ಕೋರಿದ್ದಾರೆ.
ರಾಮ ತನ್ನ ಸದ್ಗುಣಗಳಿಂದ ಆದರ್ಶ ಪುರುಷ ಎನಿಸಿಕೊಂಡಿದ್ದಾನೆ. ಸಹಸ್ರಾರು ವರ್ಷಗಳಿಂದ ಆತನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗಿದೆ. ಈಚೆಗೆ 'ರಾಮಾಯಣ' ದೂರದರ್ಶನದಲ್ಲಿ ಪ್ರಸಾರವಾದಾಗ ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ರಾಮನ ಕಥೆ, ಆದರ್ಶಗಳು ಸಹಸ್ರ ವರ್ಷಗಳವರೆಗೆ ಈ ನೆಲದಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.
ರಾಮರಾಜ್ಯದ ಕಲ್ಪನೆಗೆ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಅತೀ ಅಗತ್ಯ. ಈ ಶಿಲಾನ್ಯಾಸದ ಶುಭ ಮೂಹೂರ್ತದಲ್ಲಿ ಪ್ರಾರಂಭವಾಗಿರುವ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲೆಂದು ಅವರು ಪ್ರಾರ್ಥಿಸಿದರು.
ಕೆಲವೇ ತಿಂಗಳ ಹಿಂದೆ ಅಯೋಧ್ಯೆಗೆ ತೆರಳಿ ಪವಿತ್ರ ಭೂ ಸ್ಪರ್ಶ ಮಾಡಿ, ಹಿರಿಯ ಸಂತರಿಗೆ ಗೌರವ ಸಲ್ಲಿಸಿ ಬಂದಿದ್ದೇನೆ. ಈ ಸಾಧನೆಗೆ ಸಂಕಲ್ಪ ಮಾಡಿದ ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲಾ ಶ್ರದ್ಧಾಳುಗಳಿಗೂ ಅಭಿನಂದನೆಗಳು ಎಂದರು.