ಪುತ್ತೂರು(ದಕ್ಷಿಣ ಕನ್ನಡ): ಕಳೆದ ಎರಡು ತಿಂಗಳ ಕಾಲ ಭಕ್ತರ ಪಾಲಿಗೆ ದೂರವಾಗಿದ್ದ ಪುತ್ತೂರು ಮಹಾಲಿಂಗೇಶ್ವರ ದೇವರ ದರ್ಶನ ಭಾಗ್ಯ ಇಂದು ಪ್ರಾಪ್ತವಾದಂತಾಗಿದೆ.
ಅತ್ಯಂತ ಸುವ್ಯವಸ್ಥಿತವಾಗಿ ಸರ್ಕಾರದ ಸೂಚನೆಗಳ ಆಧಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರು ಮಹಾಲಿಂಗೇಶ್ವರ ದೇವರ ದರ್ಶನ ಪಡೆಯುತ್ತಿದ್ದಾರೆ. ಕೊರೊನಾ ಹೆಮ್ಮಾರಿ ಭೀತಿಯಿಂದ ಧಾರ್ಮಿಕ ತಾಣಗಳನ್ನು ಬಂದ್ ಮಾಡಿದ ಬಳಿಕ ಇಂದಿನಿಂದ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ದೇವಾಲಯಗಳ ಬಂದ್‌ನಿಂದ ನಿರಾಶೆ ಅನುಭವಿಸಿದ ಭಕ್ತರು, ಇಂದು ಮಹಾಲಿಂಗೇಶ್ವರ ದರ್ಶನ ಪಡೆಯುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ದೇವಾಲಯದ ಪ್ರಾಂಗಣದಲ್ಲಿ ಜನತೆಯ ಕಲರವ : ದೇವಾಲಯದಲ್ಲಿ ಅರ್ಚಕರು ಹಾಗೂ ನಿತ್ಯ ಕರಸೇವಕರನ್ನು ಹೊರತು ಪಡಿಸಿ ನಿರ್ಮಾನುಷ್ಯವಾಗಿದ್ದ ದೇವಾಲಯದ ಪ್ರಾಂಗಣದಲ್ಲಿ ಇಂದು ಜನತೆಯ ಕಲರವ ಉಂಟಾಗಿದೆ. ದೇವಳದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ದೇವರಿಗೆ ಅಡ್ಡ ಬಿದ್ದು ನಮಸ್ಕರಿಸುವವರ ಸಂಖ್ಯೆ ಹೆಚ್ಚಾಗಿತ್ತು. ಕೆಲ ಭಕ್ತರು ಹೂವು, ಹಣ್ಣು, ಎಳೆನೀರು ಮತ್ತಿತರ ಕಾಣಿಕೆ ಅರ್ಪಣೆ ಮಾಡಿದರು. ದೇವಾಲಯದ ಒಳಭಾಗದಲ್ಲಿರುವ ಕಾಣಿಕೆ ಡಬ್ಬಿಗಳು ಕಳೆದ ಎರಡು ತಿಂಗಳಿನಿಂದ ಸದ್ದು ಮಾಡದೆ ನಿಶ್ಯಬ್ದವಾಗಿದ್ದವು. ಇಂದು ಭಕ್ತರ ಪ್ರವೇಶದೊಂದಿಗೆ ಈ ಕಾಣಿಕೆ ಡಬ್ಬಿಗಳು ಸದ್ದು ಮಾಡಲಾರಂಭಿಸಿವೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ದೇವಾಲಯಗಳನ್ನು ಸೋಮವಾರದಿಂದ ತೆರೆಯಲು ಸರ್ಕಾರ ಆದೇಶ ಮಾಡಿತ್ತು. ಆದರೆ, ಈ ದೇವಾಲಯಗಳಲ್ಲಿ ಕೇವಲ ದೇವರ ದರ್ಶನ ಹೊರತು ಪಡಿಸಿ ಯಾವುದೇ ಸೇವೆಗಳನ್ನು ಮಾಡಿಸಲು ಅವಕಾಶ ನೀಡಲಾಗಿಲ್ಲ. ಇದರಿಂದ ಸ್ವಲ್ಪಮಟ್ಟಿನ ನಿರಾಶೆಯ ನಡುವೆಯೂ ದೇವರ ದರ್ಶನಕ್ಕೆ ಅವಕಾಶ ಸಿಕ್ಕಿದೆ ಎಂಬ ಖುಷಿ ಭಕ್ತರಲ್ಲಿ ಕಂಡು ಬಂದಿದೆ.
ಭಾನುವಾರವೇ ಹೊರಾಂಗಣ ಹಾಗೂ ಒಳಾಂಗಣದ ಶುಚಿ ಕೆಲಸವನ್ನು ದೇವಾಲಯದ ಸಮಿತಿ ವತಿಯಿಂದ ಮಾಡಲಾಗಿದ್ದು, ದೇವಳದ ದ್ವಾರಗೋಪುರ ಹಾಗೂ ದ್ವಾರವನ್ನು ಹೂವಿನ ಮಾಲೆಗಳಿಂದ ಮತ್ತು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಪ್ರವೇಶದ ಮೊದಲು ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯವಾಗಿದೆ. ಸಾಲಿನಲ್ಲಿಯೂ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಭಕ್ತರು ದೇವರ ದರ್ಶನ ಪಡೆಯುವಲ್ಲಿಯೂ ಮಾರ್ಕ್ ಮಾಡಿ ಅಂತರ ಕಾಯುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ. ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ನಿತ್ಯ ಕರಸೇವಕರ ಮೂಲಕ ವ್ಯವಸ್ಥೆ ಮಾಡಲಾಗಿತ್ತು.