ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಿಮಿತ್ತ ಸುಳ್ಯ ತಾಲೂಕಿನ ಮಂಡೆಕೋಲಿಗೆ ಶುಕ್ರವಾರ ಸಂಜೆ ಭೇಟಿ ನೀಡಿ, ಮಂಡೆಕೋಲಿನಲ್ಲಿ ವಾಸ್ತವ್ಯ ಹೂಡಿ, ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಸಂಜೆ ಮಂಡೆಕೋಲಿಗೆ ಆಗಮಿಸಿದ ಜಿಲ್ಲಾಧಿಕಾರಿ ಇಲ್ಲಿನ ಮುರೂರು ಚೆಕ್ಪೋಸ್ಟ್ಗೆ ಭೇಟಿ ನೀಡಿ ಸ್ಥಳೀಯರು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಸ್ತೆ ಅಭಿವೃದ್ಧಿ, ಸ್ಥಳೀಯರಿಗೆ ಅಧಿಕೃತ ಗುರುತಿನ ಚೀಟಿ ನೀಡುವ ಬಗ್ಗೆ ಸೂಚಿಸಿದರು. ಶೌಚಾಲಯ, ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಭರವಸೆ ನೀಡಿದರು.
ಛಾವಡಿ ಚರ್ಚೆ: ಬಳಿಕ ಗ್ರಾಮದ ಪುತ್ಯ ಶಾಲೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಶಾಲಾ ಮೈದಾನದಲ್ಲಿ ಛಾವಡಿ ಚರ್ಚೆ ನಡೆಸಿದರು. ಡಿಸಿ ಸಹಿತ ಜಿಲ್ಲೆಯ ಇತರ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು ಮೈದಾನದಲ್ಲಿ ಕುಳಿತುಕೊಂಡು ಚರ್ಚೆ ನಡೆಸಿದರು. ಈ ವೇಳೆ, ಮಾತನಾಡಿದ ಜಿಲ್ಲಾಧಿಕಾರಿ ಡಾ ರಾಜೇಂದ್ರ ಅವರು ತಮ್ಮ ಊರಿನ ಬಗ್ಗೆ ನೆನಪಿಸಿಕೊಂಡು, ಗ್ರಾಮಸ್ಥರ ಬೇಡಿಕೆಗಳನ್ನು ಹಂತ, ಹಂತವಾಗಿ ಪರಿಹರಿಸುವ ಭರವಸೆ ನೀಡಿದರು.
ಬಳಿಕ ಗ್ರಾಮಸ್ಥರು ವಿವಿಧ ವಿಚಾರಗಳನ್ನು ತಿಳಿಸಿದರು. ಛಾವಡಿ ಚರ್ಚೆಯಲ್ಲಿ ಗ್ಯಾಸ್ ಲೈಟ್ ಹಾಗೂ ದೊಂದಿ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಅದರ ಬೆಳಕಲ್ಲೇ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪುತ್ತೂರು ಉಪ ವಿಭಾಗ ಸಹಾಯಕ ಆಯುಕ್ತ ಗಿರೀಶ್ ನಂದನ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ಎನ್, ಮಂಡೆಕೋಲು ಗ್ರಾಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಪಿಡಿಒ ರಮೇಶ್ ಸೇರಿದಂತೆ ಅಧಿಕಾರಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾಧಿಕಾರಿ ವೀಕ್ಷಿಸಿದರು.
ಇದನ್ನೂ ಓದಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ರಾಯಚೂರು ಜಿಲ್ಲೆಯಲ್ಲಿ ಸಚಿವ ಆರ್. ಅಶೋಕ್ ಗ್ರಾಮವಾಸ್ತವ್ಯ