ಮಂಗಳೂರು(ದಕ್ಷಿಣ ಕನ್ನಡ): ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಸದ್ಯ ಚಂಡಮಾರುತವಾಗಿ ಸೃಷ್ಟಿಯಾಗಿದೆ. ಈ ಚಂಡಮಾರುತದ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದೆ. ಬಿಪೊರ್ ಜಾಯ್ ಚಂಡಮಾರುತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಬಿಸಿಲ ಧಗೆಗೆ ನಲುಗಿ ಹೋಗಿದ್ದು, ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೇಳಿ ಬರುತ್ತಿದೆ. ಇದೀಗ ಹವಾಮಾನ ಇಲಾಖೆಯು ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಚಂಡಮಾರುತ ಸೃಷ್ಟಿಯಾಗಿ ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಹವಮಾನ ಇಲಾಖೆಯ ಮುನ್ಸೂಚನೆಯಂತೆ ಜೂನ್ 7 ರಿಂದ 11ರವರೆಗೆ ಭಾರೀ ಮಳೆಯಾಗಲಿದ್ದು, ಸಮುದ್ರದಲ್ಲಿ ಅಬ್ಬರ ಹೆಚ್ಚಾಗಲಿದೆ. ಆದ್ದರಿಂದ ಕಡಲ ತೀರ ಪ್ರದೇಶದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ದ.ಕ. ಜಿಲ್ಲಾಡಳಿತ ಸೂಚನೆ ನೀಡಿದೆ. ಕೇರಳಕ್ಕೆ ಜೂನ್ 4ರಂದು ಮುಂಗಾರು ಪ್ರವೇಶದ ನಿರೀಕ್ಷೆಯಿತ್ತು. ಆದರೆ, ಅದು ಮತ್ತಷ್ಟು ವಿಳಂಬದಿಂದ ಕರಾವಳಿಗೆ ಇನ್ನೂ ಮಳೆ ಬಂದಿಲ್ಲ. ಜೂನ್ 10ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮಿಸುವ ಸಾಧ್ಯತೆಯಿದ್ದು ಆನಂತರವಷ್ಟೇ ರಾಜ್ಯದ ಮುಂಗಾರು ಪ್ರವೇಶವಾಗಲಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಕಾಣಿಸಿಕೊಂಡಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಈಗ ಚಂಡಮಾರುತ ರೂಪ ಪಡೆದುಕೊಂಡಿದೆ. ಇದರಿಂದ ದಕ್ಷಿಣ ಭಾರತದ ಪಶ್ಚಿಮ ತೀರಗಳು ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ. ಪ್ರಸ್ತುತ ಉತ್ತರದತ್ತ ಮುಖ ಮಾಡಿರುವ ಚಂಡಮಾರುತವು ಜೂನ್ 8ರಿಂದ 10ರವರೆಗೆ ಕರ್ನಾಟಕ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಲಿದೆ.
ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ: ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧವಿದೆ. ಈ ಸಂದರ್ಭದಲ್ಲಿ 10 ಅಶ್ವಶಕ್ತಿ ಯೊಳಗಿನ ಯಾಂತ್ರಿಕೃತ ದೋಣಿಗಳಲ್ಲಿ ಮಾತ್ರ 24 ನಾಟಿಕಲ್ ಮೈಲು ದೂರದವರೆಗೆ ಮೀನುಗಾರಿಕೆ ನಡೆಸಬಹುದು. ಈ ಮೀನುಗಾರಿಕೆ ನಡೆಸುವ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಚಂಡಮಾರುತ ಗಂಟೆಗೆ ಎರಡು ಕಿಲೋಮೀಟರ್ ವೇಗ: ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಅವರು ಬಿಪೊರ್ ಜಾಯ್ ಚಂಡಮಾರುತದ ಪರಿಣಾಮಗಳ ಬಗ್ಗೆ ಈಗಾಗಲೇ ಸಂಬಂಧಿಸಿದ ಇಲಾಖೆಗಳ ಜೊತೆಗೆ ಚರ್ಚೆ ಮಾಡಲಾಗಿದೆ. ಬಿಪೊರ್ ಜಾಯ್ ಚಂಡಮಾರುತ ಗಂಟೆಗೆ ಎರಡು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದು ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದಲೇ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ತುಂಬೆ ಡ್ಯಾಂಗೆ ಎಎಂಆರ್ ಡ್ಯಾಂನಿಂದ ನೀರು ಹರಿಸಲಾಗಿದೆ. ಡ್ಯಾಂನಲ್ಲಿ ದುರಸ್ತಿಯ ಹಿನ್ನೆಲೆಯಲ್ಲಿ ಜೂನ್ 4 ಮತ್ತು 5 ರಂದು ನೀರು ಸರಬರಾಜು ಆಗಿರಲಿಲ್ಲ. ಇದೀಗ ಎರಡು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದ್ದು, ಎಲ್ಲಿಯೇ ನೀರಿನ ಸಮಸ್ಯೆಯಾದರೂ ಪೂರೈಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ; 3 ತಿಂಗಳ ವಿರಾಮದ ನಂತರ ಮತ್ತೆ ಸ್ಫೋಟಗೊಳ್ಳಲು ಪ್ರಾರಂಭಿಸಿದ ಕಿಲೌಯಾ ಜ್ವಾಲಾಮುಖಿ!