ಮಂಗಳೂರು : ಬಿರಿಯಾನಿ ಆರ್ಡರ್ ಮಾಡಿ ಅದರ ಜೊತೆಗೆ ಪ್ಲೇಟ್ ನೀಡದಿರೋದಕ್ಕೆ ಗ್ರಾಹಕನೋರ್ವ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂದೂರ್‌ವೆಲ್‌ನಲ್ಲಿ ನಡೆದಿದೆ.
ನಗರದ ಬೆಂದೂರ್‌ವೆಲ್‌ನಲ್ಲಿ ಅಬ್ದುಲ್ ರಶೀದ್ ಎಂಬುವರು ಹೋಟೆಲ್ ನಡೆಸುತ್ತಿದ್ದಾರೆ. ಅಬೂಬಕರ್ ಎಂಬಾತ ಹೋಟೆಲ್ಗೆ ಬಂದು ಬಿರಿಯಾನಿ ಆರ್ಡರ್ ಮಾಡಿದ್ದಾನೆ. ಅದರ ಜೊತೆಗೆ ಖಾಲಿ ಪ್ಲೇಟ್ ನೀಡುವಂತೆ ಕೇಳಿದ್ದಾನೆ.
ಆದರೆ, ಆ ಪ್ಲೇಟ್‌ಗೆ ಹಣ ನೀಡುವಂತೆ ಅಬ್ದುಲ್ ರಶೀದ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅಬೂಬಕರ್ ಅವಾಚ್ಯವಾಗಿ ನಿಂದಿಸಿ, ಕೈ ಹಾಗೂ ಮರದ ಮಣೆಯಿಂದ ಮಾಲೀಕನಿಗೆ ಹೊಡೆದಿದ್ದಾನೆ.
ಇದನ್ನು ತಡೆಯಲು ಬಂದ ಮ್ಯಾನೇಜರ್‌ನ ಕೈಯನ್ನು ಕಚ್ಚಿದ್ದಾನೆ. ಅಲ್ಲದೆ ಆರೋಪಿ ಸುಮಾರು 10 ಸಾವಿರ ಮೌಲ್ಯದ ವಸ್ತುಗಳಿಗೆ ಹಾನಿ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಬೆಂಗಳೂರಲ್ಲಿ ಕ್ಯಾಸಿನೋಗಳ ಮೇಲೆ ಸಿಸಿಬಿ ದಾಳಿ.. ಕಂತೆ ಕಂತೆ ಹಣದ ಜತೆ 104 ಜನ ವಶಕ್ಕೆ..