ಬಂಟ್ವಾಳ : ಅಪ್ತಾಪ್ತೆ ಮೇಲೆ ಬೇರೆ ಬೇರೆ ಸಂದರ್ಭದಲ್ಲಿ ಯುವಕರು ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೋಕ್ಸೊ ಪ್ರಕರಣ ದಾಖಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿದ 16 ವರ್ಷದ ಬಾಲಕಿಯ ಮೇಲೆ ಕೇರಳದ ಕೆಲವು ಯುವಕರು ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆರೋಪಿಗಳು ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿ ಮನೆಗೆ ಬರುವಾಗ ತಡವಾದ ಕುರಿತು ವಿಚಾರಿಸಿದಾಗ ಆಕೆ ವಿಚಾರ ತಿಳಿಸಿದ್ದಾಳೆ. ಐವರು ಆರೋಪಿಗಳು ಕೆಲವು ವರ್ಷಗಳಿಂದ ದುಷ್ಕೃತ್ಯ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಬಸ್ಸಿನಲ್ಲಿ ಯುವತಿಗೆ ಕಿರುಕುಳ ಪ್ರಕರಣ : ಯುವತಿಯೊಂದಿಗೆ ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಗ್ರಾ.ಪಂ ಸದಸ್ಯನನ್ನು ಯುವಕರು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಜುಲೈ 29ರ ಸಂಜೆ ನಡೆದಿದೆ. ಯುವತಿಯೊಬ್ಬಳು ಮಂಗಳೂರಿನಿಂದ ತನ್ನ ಊರು ಮೂಡಿಗೆರೆಗೆ ಕೆಎಎಸ್ಆರ್ಟಿಸಿ ಬಸ್ಸಿನಲ್ಲಿ ಬರುತಿದ್ದಳು. ಯುವತಿಯ ಪಕ್ಕದಲ್ಲೇ ಬಂದು ಕುಳಿತ ಮಿತ್ತಬಾಗಿಲಿನ ಗ್ರಾ. ಪಂ ಸದಸ್ಯ ಕಬೀರ್ ಎಂಬಾತ ಬಸ್ ಮಡಂತ್ಯಾರು ಸಮೀಪ ಬರುತ್ತಿದ್ದಂತೆ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.
ಯುವತಿ ವಿರೋಧ ವ್ಯಕ್ತಪಡಿಸಿದರೂ ತನ್ನ ಚಾಳಿ ಮುಂದುವರಿಸಿದ್ದಾನೆ. ಈ ವೇಳೆ ಯುವತಿ ತಂದೆ ಹಾಗೂ ಉಜಿರೆಯ ತನ್ನ ಪರಿಚಯಸ್ಥ ಯುವಕರಿಗೆ ವಿಷಯ ತಿಳಿಸಿದ್ದಾಳೆ. ಬಸ್ ಉಜಿರೆಗೆ ಬರುತಿದ್ದಂತೆ ಯುವಕರು ಆರೋಪಿ ಕಬೀರ್‌ನನ್ನು ಬಸ್ಸಿನಿಂದ ಇಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.
ಲೈಂಗಿಕ ಕಿರುಕುಳ; ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ: ಚಾಮರಾಜನಗರದ ಮಕ್ಕಳಸ್ನೇಹಿ ನ್ಯಾಯಾಲಯವು ಕೊಳ್ಳೇಗಾಲದ ಭೀಮನಗರ ನಿವಾಸಿ ಶಿವಕುಮಾರ್ ಎಂಬಾತನಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗು 2 ಲಕ್ಷ ರೂ ಪರಿಹಾರ ನೀಡಲು ಆದೇಶಿಸಿತ್ತು. ಅಪರಾಧಿ ವಿರುದ್ಧ ಘಟನೆಗೆ ಸಂಬಂಧಿಸಿ 2021 ರ ಜನವರಿ 1ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಪ್ರಕಾರ, ಅಪರಾಧಿಯು ಬಾಲಕಿಯನ್ನು ಹಿಡಿದು ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಇದನ್ನು ಪ್ರಶ್ನಿಸಿದ ಬಾಲಕಿಯ ಪಾಲಕರಿಗೂ ಕೊಲೆ ಬೆದರಿಕೆ ಹಾಕಿದ್ದನು. ನ್ಯಾಯಾಲಯದಲ್ಲಿ ಅಪರಾಧಿ ವಿರುದ್ಧ ಎಲ್ಲ ಆರೋಪಗಳು ಸಾಬೀತಾಗಿದ್ದರಿಂದ ಜೂನ್ ತಿಂಗಳಿನಲ್ಲಿ ಶಿಕ್ಷೆ ನೀಡಲಾಗಿತ್ತು.
ಇದನ್ನೂ ಓದಿ: ಮಂಗಳೂರಿನಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು