ಮಂಗಳೂರು: ಹಾಸ್ಯವೆ ಪ್ರಧಾನವಾಗಿರುವ ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಕ್ರೈಂ ಆಧಾರಿತ ಸಿನಿಮಾವೊಂದು ಬಿಡುಗಡೆಯಾಗಿದೆ.
ರಮಾನಂದ ನಾಯಕ ಎಂಬವರು ನಿರ್ದೇಶನ ಮಾಡಿದ ಗೋಲ್ ಮಾಲ್ ಚಿತ್ರದಲ್ಲಿ ಮಕ್ಕಳ ಕಳುವಿನ ಬೆನ್ನತ್ತಿ ಹೋಗುವ ಪತ್ತೇದಾರಿ ಕಥೆಯನ್ನು ಸೊಗಸಾಗಿ ಹೆಣೆಯಲಾಗಿದೆ. ತುಳು ಭಾಷೆಯಲ್ಲಿ ಬಂದು ಹೋದ ಹಲವು ಸಿನಿಮಾಗಳು ಹಾಸ್ಯವನ್ನೆ ಪ್ರಧಾನವಾಗಿರಿಸಿಕೊಂಡು ನಿರ್ಮಾಣ ಮಾಡಲಾಗಿದೆ.
ತುಳು ಸಿನಿಮಾದಲ್ಲಿ ಹಾಸ್ಯ ಇದ್ದರೆ ಮಾತ್ರ ಅದಕ್ಕೆ ಪ್ರೇಕ್ಷಕರು ಹೆಚ್ಚಾಗಿ ಹೋಗುತ್ತಾರೆ. ಆ ಕಾರಣದಿಂದ ಹಾಸ್ಯವನ್ನು ಹೊರತುಪಡಿಸಿ ಸಿನಿಮಾ ನಿರ್ಮಾಣಕ್ಕೆ ಹೆಚ್ಚಿನವರು ಕೈ ಹಾಕುವುದಿಲ್ಲ. ಆದರೆ ಪತ್ತೆದಾರಿ ಕಥೆಯನ್ನು ಮುಂದಿಟ್ಟುಕೊಂಡು ಮಾಡಲಾದ ಈ ಸಿನಿಮಾದಲ್ಲಿ ನಕ್ಕು ನಗಿಸುವ ಹಾಸ್ಯ ದೃಶ್ಯಗಳನ್ನು ಜೋಡಿಸಲಾಗಿದೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ ಅವರ ಹಾಸ್ಯ ಪಾತ್ರಗಳು ಪ್ರೇಕ್ಷಕರನ್ನ ನಗೆಗಡಲ್ಲಿ ತೇಲಿಸುತ್ತವೆ.
ಹಳ್ಳಿಯೊಂದರಲ್ಲಿ ಮಕ್ಕಳು ನಿರಂತರವಾಗಿ ಕಾಣೆಯಾಗುವ ಘಟನೆಯನ್ನು ಇಟ್ಟುಕೊಂಡು ಅದರ ಪತ್ತೆದಾರಿಕೆ ಮಾಡುವ ಬಗ್ಗೆ ಸಿನಿಮಾ ಮಾಡಲಾಗಿದೆ. ಪೃಥ್ವಿ ಅಂಬರ್ ನಾಯಕ ನಟರಾಗಿ, ಒಂದು ಮೊಟ್ಟೆಯ ಕಥೆಯ ಬಳಿಕ ಶ್ರೇಯಾ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಕನ್ನಡದ ಡೈಲಾಗ್ ಕಿಂಗ್ ಸಾಯಿ ಕುಮಾರ್ ಈ ಚಿತ್ರದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾದಲ್ಲಿ ಕನ್ನಡದಲ್ಲೇ ಮಾತನಾಡಿರುವ ಸಾಯಿ ಕುಮಾರ್ ಅವರ ಡೈಲಾಗ್, ಪಾತ್ರಕ್ಕೆ ತಕ್ಕಂತೆ ಮೂಡಿ ಬಂದಿದೆ. ಮಂಜುನಾಥ್ ನಾಯಕ್ ಮತ್ತು ಅಕ್ಷಯ್ ಪ್ರಭು ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಕ್ರೈಂ ಆಧಾರಿತ ಈ ಸಿನಿಮಾದಲ್ಲಿ ಫೈಟಿಂಗ್, ದೃಶ್ಯಗಳು, ಹಾಡುಗಳು ಮತ್ತು ಹಾಸ್ಯ, ಪ್ರೇಕ್ಷಕರನ್ನು ಸೆಳೆಯಲಿದೆ ಎಂಬುದು ಚಿತ್ರ ತಂಡದ ನಿರೀಕ್ಷೆಯಾಗಿದೆ.