ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ವಿಶ್ವ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಖ್ಯಾತ ಆಟಗಾರ ಕೆ ಎಲ್ ರಾಹುಲ್ ಭೇಟಿ ನೀಡಿದರು. ಶ್ರೀ ಕುಕ್ಕೆ ದೇವಳಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರು. ಈ ವೇಳೆ ದೇವಸ್ಥಾನದ ಅರ್ಚಕರು ರಾಹುಲ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದರು. ನಂತರ ದೇವಳದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸಿದರು.
ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ರಾಹುಲ್ ಅವರನ್ನು ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್ ಅವರು ಸ್ವಾಗತಿಸಿದರು. ಸುಬ್ರಹ್ಮಣ್ಯ ದೇವರ ಭಕ್ತರಾದ ಕೆ. ಎಲ್ ರಾಹುಲ್ ಅವರು ಪ್ರತಿವರ್ಷವೂ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಭೇಟಿ ನೀಡಿದ ರಾಹುಲ್ : ಸುಬ್ರಹ್ಮಣ್ಯ ದೇವಾಯಲದ ಜೊತೆಗೆ ರಾಹುಲ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು. ಈ ವೇಳೆ ವಿವಿಧ ಪೂಜೆ ಪುನಸ್ಕಾರಗಳನ್ನು ನಡೆಸಿದರು. ನಂತರ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಈ ವೇಳೆ ಹೆಗ್ಗಡೆಯವರು ಕೆ. ಎಲ್. ರಾಹುಲ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭ ಹೇಮಾವತಿ ವಿ. ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರೇಯಸ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಶುಲ್ಕ ಕಟ್ಟಲಾಗದ ವಿದ್ಯಾರ್ಥಿಗೆ ನೆರವು ನೀಡಿದ್ದ ರಾಹುಲ್ : ಇತ್ತೀಚೆಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲಾಗದೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಕ್ರಿಕೆಟಿಗ ಕೆ ಎಲ್ ರಾಹುಲ್ ನೆರವು ನೀಡಿ ಮಾನವೀಯತೆ ಮೆರೆದಿದ್ದರು. ಬಳಿಕ ವಿದ್ಯಾರ್ಥಿಯ ಖಾತೆಗೆ ಹಣ ವರ್ಗಾಯಿಸಿ ವಿದ್ಯಾಭ್ಯಾಸ ಪಡೆಯಲು ಸಹಾಯ ಮಾಡಿದ್ದರು.
ಹುಬ್ಬಳ್ಳಿಯ ಮಹಲಿಂಗಪುರದ ಅಮೃತ ಮಾವಿನಕಟ್ಟಿ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ 600ಕ್ಕೆ 571 ಅಂಕಗಳನ್ನು ಪಡೆದು ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಿದ್ದನು. ಬಡ ಕುಟುಂಬದಿಂದ ಬಂದಿದ್ದರೂ ಉನ್ನತ ವಿದ್ಯಾಭ್ಯಾಸ ಮಾಡಲು ಆಕಾಂಕ್ಷೆ ಹೊಂದಿದ್ದನು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲಾಗದೇ ಅಸಹಾಯಕತೆ ವ್ಯಕ್ತಪಡಿಸಿದ್ದನು. ಜೊತೆಗೆ ಶಿಕ್ಷಣಕ್ಕೆ ನೆರವು ನೀಡುವಂತೆ ಕೋರಿದ್ದನು.
ಈ ಬಗ್ಗೆ ತಿಳಿದ ನಿತಿನ್ ಎಂಬುವರು ಈ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಕಾಲೇಜುವೊಂದಕ್ಕೆ ಕರೆದೊಯ್ದು ಬಿಕಾಂ ಜತೆಗೆ ಸಿಎ ಕೋಚಿಂಗ್ ಅಡ್ಮಿಷನ್ ಕೇಳಿದ್ದಾರೆ. ಇದಕ್ಕೆ ವಾರ್ಷಿಕ 85 ಸಾವಿರ ರೂ. ಆಗಲಿದೆ. ಆದರೆ ವಿದ್ಯಾರ್ಥಿ ಒಳ್ಳೆಯ ಮಾರ್ಕ್ಸ್ ಪಡೆದ ಕಾರಣ 10 ಸಾವಿರ ರಿಯಾಯಿತಿ ನೀಡಿ 75 ಸಾವಿರ ತುಂಬಲು ಕಾಲೇಜು ಆಡಳಿತ ಮಂಡಳಿ ಅವರು ಹೇಳಿದ್ದಾರೆ. ಈ ವಿಷಯವನ್ನು ನಿತಿನ್ ಅವರು ಮಂಜುನಾಥ್ ಹೆಬಸೂರು ಎಂಬವರಿಗೆ ಕರೆ ಮಾಡಿ ತಿಳಿಸುತ್ತಾರೆ. ಮಂಜುನಾಥ್ ಅವರು ತಮ್ಮ ಸ್ನೇಹಿತ ಅಕ್ಷಯ ಎಂಬವರಿಗೆ ತಿಳಿಸಿದ್ದಾರೆ. ಅಕ್ಷಯ್ ಅವರು ಕ್ರಿಕೆಟರ್ ಕೆಎಲ್ ರಾಹುಲ್ ಅವರನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ತಕ್ಷಣ ಸ್ಪಂದಿಸಿದ ರಾಹುಲ್ ವಿದ್ಯಾರ್ಥಿಯ ಕಾಲೇಜಿನ ಎಲ್ಲ ಶುಲ್ಕವನ್ನು ಭರಿಸುವುದಾಗಿ ಹೇಳಿ ಬ್ಯಾಂಕ್ ಖಾತೆ ವಿವರವನ್ನು ಪಡೆದುಕೊಂಡು ವಿದ್ಯಾರ್ಥಿಯ ಖಾತೆಗೆ ಹಣ ವರ್ಗಾಯಿಸಿದ್ದರು.
ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ ₹123 ಕೋಟಿಗೆ ಏರಿಕೆ