ಮಂಗಳೂರು (ದಕ್ಷಿಣಕನ್ನಡ): ಜಿಲ್ಲೆಯಲ್ಲಿಂದು 73 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾಗೆ ನಾಲ್ವರು ಬಲಿಯಾಗಿದ್ದಾರೆ.
ಸುಳ್ಯ ತಾಲೂಕಿನ ಒಬ್ಬರು, ಬಂಟ್ವಾಳ ತಾಲೂಕಿನ ಮೂವರು ಸಾವನ್ನಪ್ಪಿದ್ದಾರೆ. ಮಧುಮೇಹ ಸಮಸ್ಯೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯ ತಾಲೂಕಿನ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ನ್ಯುಮೋನಿಯಾ ಸಮಸ್ಯೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ 73 ವರ್ಷದ ಪುರುಷ, ಕಿಡ್ನಿ ತೊಂದರೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ಪುರುಷ ಹಾಗೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ 64 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಸಾವನ್ನಪ್ಪಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 57 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು 73 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇವರಲ್ಲಿ 11 ಮಂದಿ ಪ್ರಾಥಮಿಕ ಸಂಪರ್ಕದಿಂದ, 23 ಮಂದಿ ಐಎಲ್ಐ ಪ್ರಕರಣದಲ್ಲಿ, 3 ಮಂದಿ ಎಸ್ಎಆರ್ಐ ಪ್ರಕರಣದಲ್ಲಿ, 3 ಮಂದಿಗೆ ವಿದೇಶಿ ಪ್ರವಾಸದಿಂದ, ಒಬ್ಬರಿಗೆ ಅಂತರ್ ಜಿಲ್ಲಾ ಪ್ರವಾಸದಿಂದ ಕೊರೊನಾ ದೃಢಪಟ್ಟಿದೆ. ಇನ್ನೂ 32 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.